ಪಿಎಸ್‌ಐ ಪರುಶುರಾಮ್ ಅನುಮಾನಸ್ಪದ ಸಾವು: ಯಾದಗಿರಿಗೆ ಎಂಟ್ರಿ ಕೊಟ್ಟ ಸಿಐಡಿ ಟೀಂ
ಯಾದಗಿರಿ: ಪಿಎಸ್‌ಐ ಪರುಶುರಾಮ್ ಅನುಮಾನಸ್ಪದ ಸಾವು ಪ್ರಕರಣದ ತನಿಖೆಯನ್ನು ಸರಕಾರ ಸಿಐಡಿಗೆ ವಹಿಸಿದ್ದು, ಸಂಜೆ ಸಿಐಡಿ ಅಧಿಕಾರಿಗಳು ಯಾದಗಿರಿಗೆ ಎಂಟ್ರಿ ಕೊಟ್ಟಿದ್ದಾರೆ.
ಯಾದಗಿರಿಯಲ್ಲಿ ಪಿಎಸ್‌ಐ ಆಗಿ ಕೆಲಸ ಮಾಡುತ್ತಿದ್ದ ಪರುಶುರಾಮ್, ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಶಾಸಕರು ಲಂಚಕ್ಕಾಗಿ ಬೇಡಿಕೆಯಿಟ್ಟಿದ್ದೇ ಅವರ ಸಾವಿಗೆ ಕಾರಣ ಎಂದು ಹೇಳಲಾಗಿದ್ದು, ಶಾಸಕ ಮತ್ತು ಅವರ ಪುತ್ರನ ಮೇಲೆ ಎಫ್‌ಐಆರ್ ದಾಖಲು ಮಾಡಲಾಗಿದೆ.
ಲಂಚಕ್ಕೆ ಬೇಡಿಕೆ ಆರೋಪ ಕೇಳಿಬರುತ್ತಿದ್ದಂತೆ ಸರಕಾರ ಪಿಎಸ್‌ಐ ಸಾವಿನ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದ್ದು, ಅಧಿಕಾರಿಗಳು ಯಾದಗಿರಿಗೆ ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ. ಅನಂತರ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಪರುಶುರಾಮ್ ಗ್ರಾಮಕ್ಕೆ ತೆರಳಿ, ವಿಚಾರಣೆ ನಡೆಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ನಡುವೆ ಪರುಶುರಾಮ್ ಸಂಬಂಧಿಕರು ಮತ್ತು ಪೋಷಕರು ಸಿಬಿಐ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಪರುಶುರಾಮ್ ನಿವಾಸಕ್ಕೆ ಇಂದು ವಿಪಕ್ಷ ನಾಯಕ ಆರ್.ಅಶೋಕ್ ಆಗಮಿಸಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಜತೆಗೆ, ಪೊಲೀಸ್ ಇಲಾಖೆಯಲ್ಲಿ ನಡೆಯುತ್ತಿರುವ ಲಂಚಾವತಾರದ ವಿರುದ್ಧ ಕಿಡಿಕಾರಿದ್ದಾರೆ.


