ಡಲ್ಲಾಸ್ : ಡಲ್ಲಾಸ್ ನಗರದ ಕ್ರೀಡಾಂಗಣದಲ್ಲಿ ನಡೆದ ಟಿ-20 ವಿಶ್ವ ಕಪ್ ಕ್ರಿಕೆಟ್ ಟೂರ್ನಿಯ ಗ್ರೂಪ್-ಡಿ ವಿಭಾಗದ 15ನೇ ಪಂದ್ಯದಲ್ಲಿ ಬಲಿಷ್ಠ ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶ ರೋಚಕ ಗೆಲುವು ಸಾಧಿಸಿದೆ.
ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಶ್ರೀಲಂಕಾಗೆ ಬ್ಯಾಟಿಂಗ್ ನೀಡಿತು. ಓಪನರ್ ಪಥುಮ್ ನಿಸ್ಸಾಂಕಾ ಅವರ 47 ರನ್ ಮತ್ತು ಧನಂಜಯ ಡಿಸಿಲ್ವ ಅವರ 21 ರನ್ ನೆರವಿನಿಂದ ಲಂಕಾ ಉತ್ತಮ ಮೊತ್ತದತ್ತ ಸಾಗಿತ್ತು. ಆದರೆ ನಿಸ್ಸಾಂಕಾ(47 ರನ್) ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಅಸಲಂಕಾ 17 ರನ್ ಗಳಿಸಿ ಔಟಾದಾಗ ಪಂದ್ಯದ ದಿಕ್ಕೇ ಬದಲಾಯಿತು.
14.1 ಓವರುಗಳಲ್ಲೇ 4 ವಿಕೆಟ್ ನಷ್ಟಕ್ಕೆ 100 ರನ್ ಗಳಿಸಿದ್ದ ಲಂಕಾ ಇದ್ದಕ್ಕಿದ್ದಂತೆ ಬಾಂಗ್ಲಾದೇಶದ ಬೌಲಿಂಗ್ ಎದುರಿಸಲಾಗದೆ ಪಟ ಪಟನೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿ ಕೊನೆಗೆ 20 ಓವರುಗಳಲ್ಲಿ 9 ವಿಕೆಟ್ ನಷ್ಟಕ್ಕೆ 124 ರನ್ ಗಳಿಸಿತು.

ಬಾಂಗ್ಲಾದೇಶ ಪರ ರಿಶದ್ ಹುಸೇನ್ ಲಂಕಾದ ಪ್ರಮುಖ 3 ವಿಕೆಟ್ ಗಳಿಸಿ ಪಂದ್ಯದ ಗತಿ ಬದಲಿಸಿದರು. ಜೊತೆಗೆ ಮುಸ್ತಫಿಜುರ್ ಹಾಗೂ ಟಸ್ಕಿನ್ ಅಹ್ಮದ್ ತಲಾ 2 ವಿಕೆಟ್ ಕಬಳಿಸಿದರು. ಬಳಿಕ ಈ ಸಾಧಾರಣ ಗುರಿ ಬೆನ್ನತ್ತಿದ ಬಾಂಗ್ಲಾದೇಶ ಆರಂಭದ 5.2 ಓವರುಗಳಲ್ಲಿ 3 ವಿಕೆಟ್ ಕಳೆದುಕೊಂಡು 28 ರನ್ ಗಳಿಸಿ ತುಸು ಸಂಕಷ್ಟಕ್ಕೆ ಸಿಲುಕಿತ್ತು.
ಆದರೆ ಆಗ ಲಿಟ್ಟನ್ ದಾಸ್ (36 ರನ್) ಮತ್ತು ಟೊವಿದ್ ಹೃದಾಯ್ (40 ರನ್) ನೆರವಿನಿಂದ ಗೆಲುವಿನ ಕಡೆ ಸಾಗಿತ್ತು. ಆದರೆ ಬಳಿಕ ಮತ್ತೆ ವಿಕೆಟ್ ಗಳು ಉದುರಿ ಪಂದ್ಯ ರೋಚಕ ಹಂತಕ್ಕೆ ತಲುಪಿತು.

ಕೊನೆಯ 2 ಓವರುಗಳಲ್ಲಿ ಉಳಿದ 2 ವಿಕೆಟ್ ಗಳಿಂದ 11 ರನ್ ಗಳಿಸಬೇಕಿದ್ದಾಗ ಬಾಂಗ್ಲಾದೇಶದ ಪರ ಮಹ್ಮದುಲ್ಲಾ(ಅಜೇಯ 16 ರನ್) ಸಿಕ್ಸರ್ ಬಾರಿಸಿ 19 ಓವರುಗಳಲ್ಲೇ 8 ವಿಕೆಟ್ ಗೆ 125 ರನ್ ಗುರಿ ಮುಟ್ಟಿಸಿ ಲಂಕಾಗೆ ಸೋಲಿನ ಶಾಕ್ ನೀಡಿದರು. ಲಂಕಾ ಪರ ತುಷಾರಾ 4 ವಿಕೆಟ್ ಗಳಿಸಿದರು. ಬಾಂಗ್ಲಾದೇಶದ ಸ್ಪಿನ್ನರ್ ರಿಶದ್ ಹುಸೇನ್ ಪ್ರಮುಖ 3 ವಿಕೆಟ್ ಕಿತ್ತು ಪಂದ್ಯದ ಗತಿ ಬದಲಿಸಿದ್ದಕ್ಕೆ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು.

ಒಟ್ಟಾರೆ ವೆಸ್ಟ್ ಇಂಡೀಸ್-ಅಮೆರಿಕಾ ದೇಶಗಳಲ್ಲಿ ನಡೆಯುತ್ತಿರುವ ಟಿ- 20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಬಲಿಷ್ಠ ತಂಡಗಳಾದ ಮಾಜಿ ಚಾಂಪಿಯನ್ಸ್ ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಇದೀಗ ಶ್ರೀಲಂಕಾ ತಂಡಗಳು ಕ್ರಮವಾಗಿ ಅಫ್ಘಾನಿಸ್ತಾನ, ಅಮೆರಿಕಾ ಮತ್ತು ಬಾಂಗ್ಲಾದೇಶ ತಂಡಗಳ ವಿರುದ್ಧ ಸೋತು ಭಾರಿ ಮುಖಭಂಗ ಅನುಭವಿಸಿವೆ.

