ನ್ಯೂಯಾರ್ಕ್: ಐಪಿಎಲ್ ಗುಂಗಿನಿಂದ ಇದೀಗ ಹೊರಬಂದಿರುವ ಭಾರತ ತಂಡದ ಆಟಗಾರರು, ಟಿ-20 ವಿಶ್ವಕಪ್ ಅಭ್ಯಾಸವನ್ನು ಆರಂಭಿಸಲಿದ್ದು, ಮೊದಲ ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲಿದ್ದಾರೆ.
ಇಂದು ರಾತ್ರಿ 8 ಗಂಟೆಗೆ ನಾಸ್ಸು ಕೌಂಟಿ ಅಂತರರಾಷ್ಟ್ರೀಯ ಮೈದಾನದಲ್ಲಿ ನಡೆಯುವ ಪಂದ್ಯದಲ್ಲಿ, ಭಾರತ ಅಮೇರಿಕಾದಲ್ಲಿನ ತನ್ನ ಮೊದಲ ಪಂದ್ಯವನ್ನಾಡಲಿದೆ. ಆದರೆ, ಇದು ಅಭ್ಯಾಸ ಪಂದ್ಯವಾದ ಕಾರಣ ಅಂತರರಾಷ್ಟ್ರೀಯ ಪಂದ್ಯಗಳ ಪಟ್ಟಿಗೆ ಸೇರುವುದಿಲ್ಲ. ಭಾರತ ತಂಡದಲ್ಲಿ ವಿರಾಟ್ ಕೋಹ್ಲಿ, ರೋಹಿತ್ ಶರ್ಮಾ, ಸಂಜು ಸ್ಯಾಮ್ಸನ್, ರಿಷಬ್ ಪಂತ್ ಹೊರತುಪಡಿಸಿ, ಉಳಿದ ಬ್ಯಾಟರ್ಗಳ ಫಾರ್ಮ್ ಅಷ್ಟೊಂದು ಚೆನ್ನಾಗಿಲ್ಲ.
ಬೌಲಿಂಗ್ನಲ್ಲಿ ಯುಜುವೇಂದ್ರ ಚಹಾಲ್, ಕುಲ್ದೀಪ್ ಯಾದವ್, ಜಸ್ಪೀತ್ ಬುಮ್ರಾ, ಮಹಮದ್ ಸಿರಾಜ್, ಹರ್ಷದೀಪ್ ಸಿಂಗ್ ಸೇರಿ ಎಲ್ಲರೂ ಉತ್ತಮ ಲಯದಲ್ಲಿದ್ದಾರೆ. ಯಶಸ್ವಿ ಜೈಸ್ವಾಲ್, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ಶಿವಂ ದುಬೆಗೆ ಫಾರ್ಮ್ ಇಲ್ಲವಾದರೂ, ಅಭ್ಯಾಸ ಫಂದ್ಯದಲ್ಲಿಯೇ ಲಯ ಕಂಡುಕೊಳ್ಳಬೇಕಾಗಿದೆ. ಬಾಂಗ್ಲಾ ತಂಡದಲ್ಲಿ ಶಕೀಬ್ ಉಲ್ ಹಸನ್, ಐಪಿಎಲ್ನಲ್ಲಿ ಮಿಂಚಿದ ಮುಸ್ತಾಫಿರ್ ರೆಹಮಾನ್ ಸ್ಟಾರ್ ಆಟಗಾರರಾಗಿದ್ದಾರೆ.
ಅಮೇರಿಕಾದಲ್ಲಿ ಭಾರತ ಮೊದಲ ಪಂದ್ಯವನ್ನಾಡುತ್ತಿದ್ದು, ಈ ಪಂದ್ಯದ ಮೂಲಕ ಅಮೇರಿಕಾ ಕ್ರಿಕೆಟ್ ಅಭಿಮಾನಿಗಳು ಭಾರತದ ಆಟವನ್ನು ಕಣ್ತುಂಬಿಕೊಳ್ಳಲು ಅವಕಾಶವಿದೆ. ಹೀಗಾಗಿ, ಕ್ರೀಡಾಂಗಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಕೆಟ್ ಅಭಿಮಾನಿಗಳು ಆಗಮಿಸುವ ನಿರೀಕ್ಷೆಯಿದೆ. ಇನ್ನು ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಈಗಾಗಲೇ ಭರ್ಜರಿ ತಯಾರಿ ನಡೆಯುತ್ತಿದ್ದು, ಟಿಕೆಟ್ಗೆ ಭಾರಿ ಬೇಡಿಕೆಯಿದೆ.
