ಕ್ರೀಡೆ ಸುದ್ದಿ

ಟಿ20 ವಿಶ್ವಕಪ್ ಸೂಪರ್ 8 ಸಮೀಕರಣ: ಪಾಕಿಸ್ತಾನಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ

Share It

ಟಿ20 ವಿಶ್ವಕಪ್ 2026 ಟೂರ್ನಿಯ ಲೀಗ್ ಹಂತ ಅಂತಿಮ ಹಂತಕ್ಕೆ ತಲುಪುತ್ತಿದ್ದು, ಸೂಪರ್ 8 ಪ್ರವೇಶದ ಲೆಕ್ಕಾಚಾರ ತೀವ್ರಗೊಂಡಿದೆ. ಗ್ರೂಪ್ ‘ಎ’ಯಲ್ಲಿ ಭಾರತ ಈಗಾಗಲೇ ಸೂಪರ್ 8 ಹಂತಕ್ಕೆ ಅರ್ಹತೆ ಪಡೆದಿದ್ದು, ಉಳಿದ ಸ್ಥಾನಕ್ಕಾಗಿ ಪೈಪೋಟಿ ಕಗ್ಗಂಟಾಗಿದೆ. ವಿಶೇಷವಾಗಿ ಪಾಕಿಸ್ತಾನ ತಂಡಕ್ಕೆ ಮುಂದಿನ ಪಂದ್ಯ ನಿರ್ಣಾಯಕವಾಗಿದೆ.

ಭಾನುವಾರ ನಡೆದ ಪಂದ್ಯದಲ್ಲಿ ಭಾರತ ಎದುರು 61 ರನ್‌ಗಳ ಸೋಲು ಅನುಭವಿಸಿದ ಪಾಕಿಸ್ತಾನ, ತನ್ನ ನೆಟ್ ರನ್‌ರೇಟ್‌ಗೆ ದೊಡ್ಡ ಹೊಡೆತ ತಗೊಂಡಿದೆ. ಫೆಬ್ರವರಿ 18ರಂದು ನಡೆಯಲಿರುವ ನಮೀಬಿಯಾ ವಿರುದ್ಧದ ಪಂದ್ಯ ಪಾಕಿಸ್ತಾನಕ್ಕೆ ‘ಮಾಡು ಇಲ್ಲವೇ ಮಡಿ’ ಸಮರವಾಗಿದೆ. ಈ ಪಂದ್ಯದಲ್ಲಿ ಸೋತರೆ, ಟೂರ್ನಿಯಿಂದಲೇ ಹೊರಬೀಳುವ ಸಾಧ್ಯತೆ ಇದೆ.

ಗ್ರೂಪ್ ‘ಎ’ ಅಂಕಪಟ್ಟಿ (ಪ್ರಸ್ತುತ ಸ್ಥಿತಿ):

  1. ಭಾರತ – 6 ಅಂಕಗಳು, NRR +3.050 (ಈಗಾಗಲೇ ಸೂಪರ್ 8 ಅರ್ಹತೆ)
  2. ಅಮೆರಿಕ – 4 ಅಂಕಗಳು, NRR +0.788
  3. ಪಾಕಿಸ್ತಾನ – 4 ಅಂಕಗಳು, NRR -0.403
  4. ನೆದರ್ಲ್ಯಾಂಡ್ಸ್ – 2 ಅಂಕಗಳು, NRR -1.352

ಭಾರತ ಬುಧವಾರ ನೆದರ್ಲ್ಯಾಂಡ್ಸ್ ವಿರುದ್ಧ ಕಣಕ್ಕಿಳಿಯಲಿದ್ದು, ಪಾಕಿಸ್ತಾನ ನಮೀಬಿಯಾ ವಿರುದ್ಧ ಸೆಣಸಲಿದೆ. ಒಂದು ವೇಳೆ ನಮೀಬಿಯಾ ಪಾಕಿಸ್ತಾನವನ್ನು ಸೋಲಿಸಿದರೆ, ಉತ್ತಮ ರನ್‌ರೇಟ್ ಹೊಂದಿರುವ ಅಮೆರಿಕ ಸೂಪರ್ 8 ಹಂತಕ್ಕೆ ಸುಲಭವಾಗಿ ಅರ್ಹತೆ ಪಡೆಯಲಿದೆ. ಹೀಗಾಗಿ ಪಾಕಿಸ್ತಾನ ಮುಂದಿನ ಹಂತಕ್ಕೆ ಸಾಗಬೇಕಾದರೆ ಗೆಲುವು ಕಡ್ಡಾಯವಾಗಿದೆ. ಜೊತೆಗೆ, ರನ್‌ರೇಟ್ ಸುಧಾರಣೆ ಕೂಡ ಮಹತ್ವದ್ದಾಗಿದೆ.

ಸೂಪರ್ 8 ರೇಸ್‌ನಲ್ಲಿ ಯಾರು?: ಅಮೆರಿಕ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಜಿಂಬಾಬ್ವೆ ಇನ್ನೂ ಸೂಪರ್ 8 ಪ್ರವೇಶದ ಪೈಪೋಟಿಯಲ್ಲಿ ಉಳಿದಿವೆ. ಈ ತಂಡಗಳಿಗೆ ಲೀಗ್ ಹಂತದಲ್ಲಿ ಇನ್ನೊಂದು ಪಂದ್ಯ ಮಾತ್ರ ಬಾಕಿಯಿದ್ದು, ಅದೇ ಅವರ ಭವಿಷ್ಯ ನಿರ್ಧರಿಸಲಿದೆ. ಸೋಲು ಕಂಡ ತಂಡ ನೇರವಾಗಿ ಟೂರ್ನಿಯಿಂದ ಹೊರಬೀಳಲಿದೆ.

ಇನ್ನೊಂದೆಡೆ, ಸ್ಕಾಟ್ಲೆಂಡ್, ನೇಪಾಳ, ಓಮನ್, ನಮೀಬಿಯಾ, ಇಟಲಿ ಮತ್ತು ಕೆನಡಾ ತಂಡಗಳು ಟೂರ್ನಿಯಿಂದ ಹೊರಬಿದ್ದಿವೆ. ಅಫ್ಘಾನಿಸ್ತಾನ, ನೆದರ್ಲ್ಯಾಂಡ್ಸ್, ಐರ್ಲೆಂಡ್ ಮತ್ತು ಯುಎಇ ತಂಡಗಳು ಇನ್ನೂ ಸಣ್ಣ ಮಟ್ಟಿನ ಸಾಧ್ಯತೆಗಳನ್ನು ಕಾಯ್ದುಕೊಂಡಿದ್ದರೂ, ಇತರ ಪಂದ್ಯಗಳ ಫಲಿತಾಂಶಗಳ ಮೇಲೆಯೇ ಅವುಗಳ ಭವಿಷ್ಯ ಅವಲಂಬಿತವಾಗಿದೆ.

ಸೂಪರ್ 8 ಹಂತದ ಸ್ವರೂಪ: ಟಿ20 ವಿಶ್ವಕಪ್ 2026ರ ಸೂಪರ್ 8 ಹಂತದಲ್ಲಿ ಎಂಟು ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಪ್ರತಿ ತಂಡ ಮೂರು ಪಂದ್ಯಗಳನ್ನು ಆಡಲಿದೆ. ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸಲಿದೆ. ಬಳಿಕ ಸೆಮಿಫೈನಲ್ ಗೆದ್ದ ಎರಡು ತಂಡಗಳು ಫೈನಲ್‌ನಲ್ಲಿ ಟ್ರೋಫಿಗಾಗಿ ಸೆಣಸಾಡಲಿವೆ. ಒಟ್ಟಾರೆ, ಗ್ರೂಪ್ ‘ಎ’ಯಲ್ಲಿ ಪಾಕಿಸ್ತಾನದ ಮುಂದಿನ ಪಂದ್ಯವೇ ಅದರ ಟೂರ್ನಿ ಭವಿಷ್ಯವನ್ನು ನಿರ್ಧರಿಸಲಿದೆ.


Share It

You cannot copy content of this page