ವೆಸ್ಟ್ ಇಂಡೀಸ್ ದೇಶದ ಬಾರ್ಬಡೊಸ್ ನ ಬ್ರಿಡ್ಜ್ ಟೌನ್ ನಲ್ಲಿರುವ ಕಿಂಗ್ ಸ್ಟನ್ ಓವಲ್ ಸ್ಟೇಡಿಯಂನಲ್ಲಿ ನಡೆದ ಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸೂಪರ್-8 ರ ಗ್ರೂಪ್-2 ಪಂದ್ಯದಲ್ಲಿ ಇಂದು ಆತಿಥೇಯ ವೆಸ್ಟ್ ಇಂಡೀಸ್ ತಂಡವು ಅಮೆರಿಕಾ ವಿರುದ್ಧ 9 ವಿಕೆಟ್ ಗಳ ಸುಲಭ ಜಯ ಗಳಿಸಿದೆ.
ಟಾಸ್ ಗೆದ್ದ ವಿಂಡೀಸ್ ತಂಡವು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಇನಿಂಗ್ಸ್ ಆರಂಭಿಸಿದ ಅಮೆರಿಕಾ ಮೊದಲ ವಿಕೆಟ್ ಅನ್ನು ಬೇಗನೆ ಕಳೆದುಕೊಂಡಾಗ ಸ್ಕೋರ್ 3 ರನ್ ಆಗಿತ್ತು. ಆದರೆ ಈ ಹಂತದಲ್ಲಿ ಓಪನರ್ ಆಂಡ್ರಿಸ್ ಗೌಸ್ ಮತ್ತು ಎನ್.ಆರ್.ಕುಮಾರ್ ಉತ್ತಮ ಬ್ಯಾಟಿಂಗ್ ನಡೆಸಿ ಸ್ಕೋರ್ ಅನ್ನು 56 ರನ್ ವರೆಗೆ ಕೊಂಡೊಯ್ದರು. ಈ ವೇಳೆ ಎನ್.ಆರ್.ಕುಮಾರ್ 20 ರನ್ ಗಳಿಸಿ ಔಟಾದರು. ಆಗ ಅಮೆರಿಕಾದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಅಷ್ಟೇನೂ ಯಶಸ್ಸು ಕಾಣದೆ ವಿಂಡೀಸ್ ಮೇಲುಗೈ ಸಾಧಿಸಿತು. ಕೊನೆಯಲ್ಲಿ ಮಿಲಿಂದ್ ಕುಮಾರ್ 19 ರನ್, ವಾನ್ ಶಾಲ್ಕಿಕ್ 18 ರನ್ ಹಾಗೂ ಅಲಿ ಖಾನ್ ಔಟಾಗದೇ 14 ರನ್ ಹೊಡೆದ ಕಾರಣ ಅಮೆರಿಕಾ 19.5 ಓವರುಗಳಲ್ಲಿ 128 ರನ್ ಗಳಿಸಿ ಆಲೌಟ್ ಆಯಿತು.
ವಿಂಡೀಸ್ ಪರ ವೇಗದ ಬೌಲರ್ ರಸೆಲ್ ಮತ್ತು ಸ್ಪಿನ್ನರ್ ರೋಸ್ಟನ್ ಚೇಸ್ ತಲಾ 3 ವಿಕೆಟ್ ಗಳಿಸಿ ಅಮೆರಿಕಾ ಬ್ಯಾಟಿಂಗ್ ಗೆ ಕಡಿವಾಣ ಹಾಕಲು ಕಾರಣರಾದರು.
ಬಳಿಕ 129 ರನ್ ಗೆಲುವಿನ ಗುರಿ ಬೆನ್ನತ್ತಿ ಬ್ಯಾಟಿಂಗ್ ಆರಂಭಿಸಿದ ವೆಸ್ಟ್ ಇಂಡೀಸ್ ಪರ ಓಪನರ್ ಗಳಾದ ಶಾಯ್ ಹೋಪ್ ಮತ್ತು ಜಾನ್ಸನ್ ಚಾರ್ಲ್ಸ್ ಭರ್ಜರಿ ಆರಂಭ ಒದಗಿಸಿದರು. ಆದರೆ ವಿಂಡೀಸ್ 67 ರನ್ ಗಳಿಸಿದ್ದಾಗ 15 ರನ್ ಗಳಿಸಿದ್ದ ಜಾನ್ಸನ್ ಚಾರ್ಲ್ಸ್ ಔಟಾದರು. ಆದರೆ ಬಳಿಕ ಕ್ರೀಸ್ ಗೆ ಬಂದ ನಿಕೊಲಸ್ ಪೂರನ್ ಓಪನರ್ ಶಾಯ್ ಹೋಪ್ ಜೊತೆಗೂಡಿ ಅಮೆರಿಕಾ ಬೌಲರ್ ಗಳನ್ನು ಚೆಂಡಾಡಿದರು. ಪರಿಣಾಮ ವಿಂಡೀಸ್ ಕೇವಲ 10.5 ಓವರುಗಳಲ್ಲೇ 1 ವಿಕೆಟ್ ನಷ್ಟಕ್ಕೆ 130 ರನ್ ಹೊಡೆದು ಭರ್ಜರಿ ಗೆಲುವು ದಾಖಲಿಸಿತು.
ವಿಂಡೀಸ್ ಪರ ಓಪನರ್ ಶಾಯ್ ಹೋಪ್ ಬಿರುಸಿನ ಅಜೇಯ 82 ರನ್(39 ಎಸೆತ, 4 ಬೌಂಡರಿ, 6 ಸಿಕ್ಸರ್) ಹಾಗೂ ನಿಕೊಲಸ್ ಪೂರನ್ ಅಜೇಯ 27 ರನ್(12 ಎಸೆತ, 1 ಬೌಂಡರಿ, 3 ಸಿಕ್ಸರ್) ಗಳಿಸಿದರು.
ಅಮೆರಿಕಾದ ಪ್ರಮುಖ 3 ವಿಕೆಟ್ ಗಳನ್ನು ಪಡೆದು ಪಂದ್ಯಕ್ಕೆ ತಿರುವು ನೀಡಿದ ವಿಂಡೀಸ್ ಸ್ಪಿನ್ನರ್ ರೋಸ್ಟನ್ ಚೇಸ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಗಳಿಸಿದರು.
ಈ ಭರ್ಜರಿ ಗೆಲುವಿನ ಮೂಲಕ ಆತಿಥೇಯ ವೆಸ್ಟ್ ಇಂಡೀಸ್ ಸೂಪರ್-8 ರ ಹಂತದ ಗ್ರೂಪ್-2 ರ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿತು.
ಕಡೆಯ ಮತ್ತು ನಿರ್ಣಾಯಕ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಅಮೆರಿಕಾ ವಿರುದ್ಧ ಭಾರಿ ಅಂತರದಿಂದ ಗೆದ್ದರೆ ಮಾತ್ರ ವೆಸ್ಟ್ ಇಂಡೀಸ್ ತಂಡವನ್ನು ರನ್ ರೇಟ್ ಆಧಾರದಲ್ಲಿ ಹಿಂದೂಡಿ ಸೆಮಿಫೈನಲ್ ಪ್ರವೇಶಿಸಲಿದೆ. ಆದರೆ ವೆಸ್ಟ್ ಇಂಡೀಸ್ ಕೊನೆಯ ಪಂದ್ಯದಲ್ಲಿ ಏನಾದರೂ ದಕ್ಷಿಣ ಆಫ್ರಿಕಾ ವಿರುದ್ಧ ಸೋತರೆ ಆಗ ಇಂಗ್ಲೆಂಡ್ ತನ್ನ ಕೊನೆಯ ಪಂದ್ಯದಲ್ಲಿ ಅಮೆರಿಕಾ ವಿರುದ್ಧ ಗೆದ್ದರೆ ಸಾಕು ಸೆಮಿಫೈನಲ್ ಪ್ರವೇಶಿಸಲಿದೆ.
ಸೂಪರ್-8 ಹಂತದ ಗ್ರೂಪ್-2 ರಲ್ಲಿ ಅಮೆರಿಕಾ ವಿರುದ್ಧದ ಗೆಲುವಿನಿಂದ ವೆಸ್ಟ್ ಇಂಡೀಸ್ 2ನೇ ಸ್ಥಾನಕ್ಕೇರಿ ರನ್ ರೇಟ್ ಅನ್ನು +1.814 ಕ್ಕೆ ಸುಧಾರಿಸಿಕೊಂಡಿದೆ. ಆದರೆ ಕೊನೆಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಬಲಿಷ್ಠ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದರೆ ಮಾತ್ರ ಸೆಮಿಫೈನಲ್ ಪ್ರವೇಶಿಸಲಿದೆ. ಹೀಗಾಗಿ ಆತಿಥೇಯ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ನಾಳೆ ಬೆಳಗ್ಗೆ 6 ಗಂಟೆಗೆ (ಭಾರತೀಯ ಕಾಲಮಾನ) ನಡೆಯಲಿರುವ ಪಂದ್ಯ ಬಹಳ ಕುತೂಹಲ ಕೆರಳಿಸಿದೆ.
ಹಾಗಾಗಿ +0.412 ರನ್ ರೇಟ್ ಹೊಂದಿರುವ ಇಂಗ್ಲೆಂಡ್ ಮತ್ತು ಅಮೆರಿಕಾ ನಡುವಿನ ಸೂಪರ್-8 ಹಂತದ ಗ್ರೂಪ್-2 ನ ಕೊನೆಯ ಪಂದ್ಯ
ನಾಳೆ ಭಾನುವಾರ ರಾತ್ರಿ 8 ಗಂಟೆಗೆ (ಭಾರತೀಯ ಕಾಲಮಾನ) ನಡೆಯಲಿದ್ದು, ಈ ಪಂದ್ಯವೂ ಸಹ ಕುತೂಹಲ ಕೆರಳಿಸಿದೆ.
