ನವದೆಹಲಿ: ಹೌದು, ನಿನ್ನೆ ದೇಶದ 2024 ರ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ.
ಆದರೆ ಆಡಳಿತಾರೂಢ ಬಿಜೆಪಿ ಪಕ್ಷ 2024 ರ ಲೋಕಸಭಾ ಚುನಾವಣೆಯಲ್ಲಿ 63 ಕ್ಷೇತ್ರಗಳಲ್ಲಿ ಸೋತು 240 ಸ್ಥಾನಗಳಿಗೆ ತೃಪ್ತಿ ಕಟ್ಟಿಕೊಂಡಿದೆ. ಇನ್ನು ಕಳೆದ ಬಾರಿ ಅತ್ಯಂತ ದಯನೀಯ ಸೋಲು ಕಂಡಿದ್ದ ಕಾಂಗ್ರೆಸ್(ಐ) ಪಕ್ಷ ಈ ಬಾರಿ 47 ಸ್ಥಾನಗಳನ್ನು ಹೆಚ್ಚಾಗಿ ಗೆದ್ದು 99 ಸ್ಥಾನಗಳಿಗೆ ತನ್ನ ಬಲವನ್ನು ಹಿಗ್ಗಿಸಿಕೊಂಡಿದೆ.
ಜೊತೆಗೆ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಬರೋಬ್ಬರಿ 235 ಸಂಸದರನ್ನು ಗೆಲ್ಲಿಸಿಕೊಂಡು 273 ಮ್ಯಾಜಿಕ್ ನಂಬರ್ ತಲುಪಲು 38 ಸಂಸದರ ಬೆಂಬಲದ ಕೊರತೆ ಎದುರಿಸುತ್ತಿದೆ. ಆದರೆ ಬಿಜೆಪಿ ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಅಲೆಯನ್ಸ್ 293 ಸಂಸದರನ್ನು ಗೆಲ್ಲಿಸಿಕೊಂಡು ಬಹುಮತ ಗಳಿಸಿದೆ.
ಇಷ್ಟಾದರೂ ಈ ಬಾರಿ 17 ಸಂಸದರನ್ನು ಗೆಲ್ಲಿಸಿಕೊಂಡು ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ 175 ಸ್ಥಾನಗಳ ಪೈಕಿ ಬರೋಬ್ಬರಿ 135 ಸ್ಥಾನ ಪಡೆದು ಪವನ್ ಕಲ್ಯಾಣ್ ಅವರ ಜನಸೇವಾ ಪಕ್ಷದ 21 ಶಾಸಕರು ಮತ್ತು ಬಿಜೆಪಿಯ 8 ಶಾಸಕರ ಬೆಂಬಲದಿಂದ ದಾಖಲೆಯ 164 ಶಾಸಕರ ಬೆಂಬಲದಿಂದ ಆಂಧ್ರಪ್ರದೇಶ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಚಂದ್ರಬಾಬು ನಾಯ್ಡು ಅವರು ಪ್ರಮಾಣವಚನ ಸ್ವೀಕರಿಸುವುದಕ್ಕೆ ಎಲ್ಲಾ ಸಿದ್ಧತೆಗಳು ಹೈದರಾಬಾದ್ ನಲ್ಲಿ ನಡೆದಿವೆ.
ಆದರೆ ಅಷ್ಟರಲ್ಲೇ ಚಂದ್ರಬಾಬು ನಾಯ್ಡು ಅವರು ಇಂದು ಬುಧವಾರ ಸಂಜೆ ಎನ್.ಡಿ.ಎ ಸಭೆಯಲ್ಲಿ ಪಾಲ್ಗೊಳ್ಳಲು ನವದೆಹಲಿಯ ವಿಮಾನ ಏರಿ ಪ್ರಯಾಣಿಸುತ್ತಿದ್ದಾರೆ. ಆಂಧ್ರಪ್ರದೇಶ ರಾಜ್ಯದ 40 ಸ್ಥಾನಗಳ ಲೋಕಸಭಾ ಚುನಾವಣೆಯಲ್ಲಿ ಟಿಡಿಪಿ 17, ಪವನ್ ಕಲ್ಯಾಣ್ ಅವರ ಜನಸೇವಾ ಪಕ್ಷ 2 ಹಾಗೂ ಬಿಜೆಪಿ ಒಂದು ಸ್ಥಾನ ಗೆದ್ದಿವೆ. ಹೀಗಾಗಿ ಆಂಧ್ರಪ್ರದೇಶದಲ್ಲಿ ಎನ್.ಡಿ.ಎ ಒಟ್ಟಾರೆ 20 ಸ್ಥಾನ ಗೆದ್ದಿದೆ.
ಆದರೆ ಈವರೆಗೆ ಆಂಧ್ರಪ್ರದೇಶ ರಾಜ್ಯದ ಆಡಳಿತ ಪಕ್ಷವಾಗಿದ್ದ ಹಾಲಿ ಸಿಎಂ ಜಗನ್ ಮೋಹನ್ ರೆಡ್ಡಿ ಅವರ ವೈ.ಎಸ್.ಆರ್.ಸಿ.ಪಿ ಕೇವಲ 4 ಸಂಸದರನ್ನು ಮಾತ್ರ ಗೆಲ್ಲಿಸಿಕೊಳ್ಳಲು ಯಶಸ್ವಿಯಾಗಿದೆ. ಜೊತೆಗೆ ಆಂಧ್ರಪ್ರದೇಶ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಕೇವಲ 9 ಶಾಸಕರನ್ನು ಗೆಲ್ಲಿಸಿಕೊಂಡು ಅತ್ಯಂತ ಹೀನಾಯ ಸೋಲು ಕಂಡ ಜಗನ್ ಮೋಹನ್ ರೆಡ್ಡಿ ಅವರು ಈಗಾಗಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ರಾಜ್ಯದ ನೂತನ ಸಿಎಂ ಆಗಲಿರುವ ಚಂದ್ರಬಾಬು ನಾಯ್ಡು ಅವರ ಮನೆಗೆ ಧಾವಿಸಿ ಪವನ್ ಕಲ್ಯಾಣ್ ಮತ್ತವರ ಪತ್ನಿ, ಮಗ ಹೃದಯ ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿ ಬೆಂಬಲ ನೀಡಿದ್ದಾರೆ. ಅದರಲ್ಲೂ ಚಂದ್ರಬಾಬು ನಾಯ್ಡು ಅವರ ಕಾಲಿಗೆ ಬೀಳು ಎಂದು ಮಗನಿಗೆ ಪವನ್ ಕಲ್ಯಾಣ್ ಆದೇಶಿಸಿದ್ದಾರೆ.
ಆಗ ಮಾತನಾಡಿದ ಪವನ್ ಕಲ್ಯಾಣ್ ನಮ್ಮ ಇಂಡಿಯಾ ಮೈತ್ರಿಕೂಟ ಸೇರಿ ಪ್ರಧಾನಿ ಹುದ್ದೆ ಕೊಡುತ್ತೇವೆಂದು ನಿಮಗೆ ಭರ್ಜರಿ ಆಫರ್ ಬಂದಿರೋದು ಗೊತ್ತು. ಆದರೆ ನಾನು ಯಾವುದೇ ಕಾರಣಕ್ಕೂ ಇಂಡಿಯಾ ಮೈತ್ರಿಕೂಟ ಸೇರಲ್ಲ, ನೀವು ಬೇಕಾದರೆ ಹೋಗಿ ಸಾರ್ ಎಂದು ತಮ್ಮ ನಿರ್ಧಾರವನ್ನು ಪವನ್ ಕಲ್ಯಾಣ್ ಕಡ್ಡಿಮುರಿದಂತೆ ನಾಯ್ಡು ಅವರಿಗೆ ಹೇಳಿದ್ದಾರೆ. ಆದರೆ ನಾಯ್ಡು ಮಾತ್ರ ನಾನು ಎನ್.ಡಿ.ಎ ಸಭೆಯಲ್ಲಿ ಭಾಗವಹಿಸಿ ನರೇಂದ್ರ ಮೋದಿ ಅವರಿಗೆ ಪ್ರಧಾನಿಯಾಗಲು ಬೆಂಬಲ ಕೊಡುತ್ತೇನೆ ಎಂದು ಹೇಳಿದ್ದಾರೆ.
ಹೀಗೆ ಹೇಳಿ ಹೈದರಾಬಾದ್ ನಿಂದ ನವದೆಹಲಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿರುವ ಚಂದ್ರಬಾಬು ನಾಯ್ಡು ಅವರು ಬಿಜೆಪಿಗೆ ಬೆಂಬಲ ನೀಡಲು ಕೆಲವು ಕಠಿಣ ಷರತ್ತುಗಳನ್ನು ಈಡೇರಿಸುವಂತೆ ಬೇಡಿಕೆ ಇಡಲಿದ್ದಾರೆ ಎಂದು ತಿಳಿದುಬಂದಿದೆ.
ಟಿಡಿಪಿ ಬೇಡಿಕೆಗಳಿವು: ತಮ್ಮ ಟಿ.ಡಿ.ಪಿ ಪಕ್ಷಕ್ಕೆ ಕೃಷಿ, ಐಟಿ, ಜಲಶಕ್ತಿ ಸೇರಿದಂತೆ 5 ರಿಂದ 6 ಕೇಂದ್ರ ಸಚಿವ ಸ್ಥಾನಗಳನ್ನು ನೀಡಬೇಕು. ಆಂಧ್ರಪ್ರದೇಶಕ್ಕೆ ಪ್ರತ್ಯೇಕ ರಾಜ್ಯ ಸ್ಥಾನಮಾನ ನೀಡಬೇಕು ಮತ್ತು ಲೋಕಸಭೆಯ ಸ್ಪೀಕರ್ ಸ್ಥಾನವನ್ನು ನೀಡಬೇಕು. ಇಂದು ಸಂಜೆ ಎನ್.ಡಿ.ಎ ಸಭೆಯಲ್ಲಿ ಭಾಗವಹಿಸುವ ಮುನ್ನ ಈ ಬೇಡಿಕೆಗಳನ್ನು ಈಡೇರಿಸಿ ಎಂದು ಚಂದ್ರಬಾಬು ನಾಯ್ಡು ಷರತ್ತುಬದ್ಧ ಬೆಂಬಲ ನೀಡಲು ನಿರ್ಧರಿಸಿದ್ದಾರೆ.
ಹಿಂದೆ ಇದೇ ರೀತಿ ಪ್ರತ್ಯೇಕ ರಾಜ್ಯ ಸ್ಥಾನಮಾನದ ಈಡೇರಿಸಲು ಬಿಜೆಪಿ ಸರ್ಕಾರ ಮುಂದಾಗಿರಲಿಲ್ಲ, ಆಗ ಸಿಟ್ಟಾಗಿ ಎನ್.ಡಿ.ಎ ಮಿತ್ರಕೂಟದಿಂದ ಹೊರಬಂದಿದ್ದ ಚಂದ್ರಬಾಬು ನಾಯ್ಡು ಸಂಜೆ ಇದೇ ಬೇಡಿಕೆ ಈಡೇರಿಸಲು ಎನ್.ಡಿ.ಎ ಸಭೆಯಲ್ಲಿ ಒತ್ತಾಯಿಸಲು ಸಜ್ಜಾಗಿದ್ದಾರೆ.
ಮತ್ತೊಂದೆಡೆ ಬಿಹಾರ ರಾಜ್ಯದಲ್ಲಿ ರಾಷ್ಟ್ರೀಯ ಜನತಾ ದಳ ಬೆಂಬಲದಿಂದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿದ್ದ ನಿತೀಶ್ ಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆಗ ನಿತೀಶ್ ಕುಮಾರ್ ಅವರು ಆರ್.ಜೆ.ಡಿ-ಕಾಂಗ್ರೆಸ್ ಒಳಗೊಂಡ ಮೈತ್ರಿ ಸರ್ಕಾರ ತ್ಯಜಿಸಿ ಜೊತೆಗೆ ಇಂಡಿಯಾ ಮೈತ್ರಿಕೂಟ ಬಿಟ್ಟು ಮತ್ತೆ ಎನ್.ಡಿ.ಎ ಸೇರುವ ನಿರ್ಧಾರ ಕೈಗೊಂಡರು. ಇದರಿಂದ ಬಿಹಾರದಲ್ಲಿ ಮತ್ತೆ ಜೆಡಿಯು-ಬಿಜೆಪಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು ನಿತೀಶ್ ಕುಮಾರ್ ಮತ್ತೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಆದರೆ 2019 ರ ಲೋಕಸಭಾ ಚುನಾವಣೆಯಲ್ಲಿ ಗಳಿಸಿದ್ದ 39 ಸ್ಥಾನಗಳ ಬದಲಿಗೆ ಎನ್.ಡಿ.ಎ ಈ ಬಾರಿ 30 ಸಂಸದರನ್ನು ಮಾತ್ರ ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಬಿಹಾರ ಲೋಕಸಭಾ ಚುನಾವಣೆಯಲ್ಲಿ ಜೆಡಿಯು ಮತ್ತು ಬಿಜೆಪಿ ತಲಾ 12 ಸ್ಥಾನಗಳನ್ನು ಗೆದ್ದುಕೊಂಡಿವೆ. ಜೊತೆಗೆ ದಿವಂಗತ ಮಾಜಿ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ಎಲ್.ಜೆ.ಪಿ(ಆರ್) ಪಕ್ಷ 5 ಸ್ಥಾನ ಗೆದ್ದುಕೊಂಡಿದೆ.
ಈ ಮೂಲಕ ಬಿಹಾರ ರಾಜ್ಯದಲ್ಲಿ ಮರಳಿ ತಮ್ಮ ಜನಪ್ರಿಯತೆ ಪ್ರದರ್ಶಿರುವ ನಿತೀಶ್ ಕುಮಾರ್ ಅವರ ಬೆಂಬಲ ಪಡೆಯಲು ಇಂಡಿಯಾ ಮೈತ್ರಿಕೂಟ ಸದ್ದಿಲ್ಲದೆ ಲಾಬಿ ನಡೆಸುತ್ತಿದೆ. ಆದರೆ ಈಗಾಗಲೇ ತಮ್ಮ ಪಕ್ಷದ ಬೆಂಬಲ ಯಾವುದೇ ಕಾರಣಕ್ಕೂ ಇಂಡಿಯಾ ಮೈತ್ರಿಕೂಟಕ್ಕೆ ಇಲ್ಲ ಎಂದು ನಿತೀಶ್ ಕುಮಾರ್ ಅವರ ಆಪ್ತ ಕೆ.ಸಿ.ತ್ಯಾಗಿ ಹೇಳಿದ್ದಾರೆ.
ಆದರೆ ನಿತೀಶ್ ಕುಮಾರ್ ಅವರೂ ಕೂಡ ಬಿಹಾರ ರಾಜ್ಯಕ್ಕೆ ಕೇಂದ್ರ ಸರ್ಕಾರ ಪ್ರತ್ಯೇಕ ಸ್ಥಾನಮಾನ ನೀಡಬೇಕೆಂದು ಇಂದು ಸಂಜೆ ದೆಹಲಿಯಲ್ಲಿ ನಡೆಯಲಿರುವ ಎನ್.ಡಿ.ಎ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ಬಲವಾಗಿ ಬೇಡಿಕೆ ಮಂಡಿಸಲಿದ್ದಾರೆ ಎಂದು ತಿಳಿದುಬಂದಿದೆ.
ದೇಶದಲ್ಲೇ ಅತ್ಯಂತ ಹೆಚ್ಚು ಬಡವರು ಇರುವ ಬಿಹಾರ ರಾಜ್ಯಕ್ಕೆ ಕಳೆದ ವರ್ಷ ಮೋದಿ ಸರ್ಕಾರ ಹೆಚ್ಚಿನ ಅನುದಾನ ನೀಡಿತ್ತು. ಆದರೆ ಇದೀಗ ಬಿಹಾರ ರಾಜ್ಯಕ್ಕೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ನೀಡಿದರೆ ಆಂಧ್ರಪ್ರದೇಶ, ಜಮ್ಮು-ಕಾಶ್ಮೀರ ರಾಜ್ಯಗಳೂ ಕೂಡ ಇದೇ ಬೇಡಿಕೆ ಮಂಡಿಸಲಿವೆ ಎಂದು ಬಿಜೆಪಿ ಆಲೋಚಿಸಿದೆ.
ಒಂದು ವೇಳೆ ಇಂಡಿಯಾ ಮೈತ್ರಿಕೂಟ ಬಿಹಾರ ಮತ್ತು ಆಂಧ್ರಪ್ರದೇಶ ಎರಡೂ ರಾಜ್ಯಗಳಿಗೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ನೀಡುತ್ತೇವೆ. ಆಗ ಎನ್.ಡಿ.ಎ ಮೈತ್ರಿಕೂಟ ಚದುರುವ ಸಾಧ್ಯತೆ ಹೆಚ್ಚಿಸುತ್ತದೆ. ಇದರಿಂದಾಗಿಯೇ ಇದೇ ಮೇ. 8 ರಂದು ಬೇಗನೆ ಪ್ರಧಾನಿಯಾಗಿ ಮತ್ತೆ 3ನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಲು ನರೇಂದ್ರ ಮೋದಿ ಅವರು ಸಜ್ಜಾಗಿದ್ದಾರೆ.
ಆದರೆ ಇನ್ನೆರಡು ದಿನಗಳಲ್ಲಿ ಏನು ಬೇಕಾದರೂ ಆಗಿ ಪ್ರಧಾನಿ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕಾರ ಸಮಾರಂಭ ಮುಂದೂಡಿಕೆಯಾದರೆ ಸಾಕು, ಎನ್.ಡಿ.ಎ ಮೈತ್ರಿಕೂಟದಲ್ಲಿ ಎಲ್ಲವೂ ಸರಿ ಇಲ್ಲ ಎಂದು ಬಟಾಬಯಲಾಗಲಿದೆ. ಮುಂದೆ ಏನಾದರೂ ಟಿಡಿಪಿ ಮತ್ತು ಜೆಡಿಯು ಪಕ್ಷಗಳು ಎನ್.ಡಿ.ಎ ಸರ್ಕಾರದಿಂದ ಹೊರಬಂದರೆ, ಆಗ ಇಂಡಿಯಾ ಮೈತ್ರಿಕೂಟ ಕೇಂದ್ರ ಸರ್ಕಾರ ರಚಿಸುವ ಪ್ರಯತ್ನ ನಡೆಸಲಿದೆ.
ಹಾಗಾಗಿ ನರೇಂದ್ರ ಮೋದಿ ಅವರು ಎನ್.ಡಿ.ಎ ಮೈತ್ರಿಕೂಟದ ಪ್ರಧಾನಿಯಾಗಿ ಹಿಂದಿನಂತೆ ಅಮಿತ್ ಶಾ ಅವರ ಕೈಗೊಂಬೆಯಾಗದೆ, ಮಿತ್ರ ಪಕ್ಷಗಳ ಮಾತಿಗೆ ಬೆಲೆ ಕೊಟ್ಟು ಅಧಿಕಾರ ನಡೆಸುವ ಅನಿವಾರ್ಯತೆ ಇದೆ. ಆದರೆ ಹಿಂದೆ 1999 ರಲ್ಲಿ 24 ಪಕ್ಷಗಳ ಎನ್.ಡಿ.ಎ ಮೈತ್ರಿಕೂಟದ ಪ್ರಧಾನಿಯಾಗಿ ಅಟಲ್ ಬಿಹಾರಿ ವಾಜಪೇಯಿ ಅವರು ಸಂಪೂರ್ಣವಾಗಿ 5 ವರ್ಷ ಯಶಸ್ವಿಯಾಗಿ ಆಡಳಿತ ನಡೆಸಿದಂತೆ ಇದೀಗ ನರೇಂದ್ರ ಮೋದಿ ಅವರು ದೇಶವನ್ನು ಪ್ರಧಾನಿಯಾಗಿ ಮುನ್ನಡೆಸಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ.
– ಅಶೋಕ ಡಿ.ಎಂ.