ಉಪಯುಕ್ತ ಸುದ್ದಿ

ಜೂ. 30ಕ್ಕೆ ಶಿಕ್ಷಕರ ಅರ್ಹತಾ ಪರೀಕ್ಷೆ

Share It

ತುಮಕೂರು : ಜಿಲ್ಲೆಯಲ್ಲಿ ಜೂ. 30ರಂದು ನಡೆಯಲಿರುವ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ನಿಯಮಾನುಸಾರ ನಡೆಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು, ಪರೀಕ್ಷಾರ್ಥಿಗಳು ಪರೀಕ್ಷಾ ಕೇಂದ್ರದೊಳಗೆ ಪ್ರವೇಶಿಸುವ ಮುನ್ನ ಯಾವುದೇ ರೀತಿಯ ಎಲೆಕ್ಟಾçನಿಕ್ ಉಪಕರಣ, ಮೊಬೈಲ್ ಫೋನ್ ಕೊಂಡೊಯ್ಯದಂತೆ ಕಟ್ಟುನಿಟ್ಟಿನ ತಪಾಸಣೆ ಮಾಡಬೇಕೆಂದು ನಿರ್ದೇಶಿಸಿದರು.

ನಗರದ 17 ಹಾಗೂ ಮಧುಗಿರಿ ಪಟ್ಟಣದ 5 ಕೇಂದ್ರ ಸೇರಿ ಒಟ್ಟು 22 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಕೇಂದ್ರಕ್ಕೆ ಕುಡಿಯುವ ನೀರು, ಶೌಚಾಲಯ, ಗಾಳಿ-ಬೆಳಕಿನ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಬೇಕಲ್ಲದೆ, ಎಲ್ಲಾ ಕೇಂದ್ರಗಳಿಗೂ ಆರೋಗ್ಯ ಸಹಾಯಕರನ್ನು ನಿಯೋಜಿಸಬೇಕು. ಪರೀಕ್ಷಾರ್ಥಿಗಳಿಗೆ ಕಾಣುವಂತೆ ಕೊಠಡಿ ಹಂಚಿಕೆ ಮಾಹಿತಿ ಅಳವಡಿಸಬೇಕು ಎಂದು ಸೂಚನೆ ನೀಡಿದರು.

ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ(ತುಮಕೂರು) ಕೆ. ಮಂಜುನಾಥ್ ಹಾಗೂ ಉಪನಿರ್ದೇಶಕ (ಮಧುಗಿರಿ) ಮಂಜುನಾಥ್ ಅವರು, ಜಿಲ್ಲೆಯಲ್ಲಿ ತುಮಕೂರಿನ ಪರೀಕ್ಷಾ ಕೇಂದ್ರಗಳಲ್ಲಿ 4363 ಹಾಗೂ ಮಧುಗಿರಿ ಪರೀಕ್ಷಾ ಕೇಂದ್ರಗಳಲ್ಲಿ 1120 ಸೇರಿ 5483 ಅಭ್ಯರ್ಥಿಗಳು ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ಬರೆಯಲಿದ್ದಾರೆ. ಪರೀಕ್ಷೆಯು ಜೂನ್ 30ರ ಬೆಳಿಗ್ಗೆ 9.30 ರಿಂದ 12 ಗಂಟೆಯವರೆಗೆ ಹಾಗೂ ಮಧ್ಯಾಹ್ನ 2 ರಿಂದ 4.30 ಗಂಟೆಯವರೆಗೆ ನಡೆಯಲಿದ್ದು, ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಬ್ದುಲ್ ಖಾದರ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಹಾಲಸಿದ್ಧಪ್ಪ ಪೂಜೇರಿ, ಶಿಕ್ಷಣ ಅಧಿಕಾರಿ ಹಾಗೂ ಪರೀಕ್ಷಾ ನೋಡಲ್ ಅಧಿಕಾರಿ ರಂಗದಾಸಪ್ಪ ಸೇರಿ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು ಭಾಗವಹಿಸಿದ್ದರು.


Share It

You cannot copy content of this page