ಕ್ರೀಡೆ ಸುದ್ದಿ

ಇಂಗ್ಲೆಂಡ್ ವಿರುದ್ಧ ಗೆದ್ದು ಸೇಡು ತೀರಿಸಿಕೊಂಡು ಫೈನಲ್ ಗೇರಿದ ಟೀಂ ಇಂಡಿಯಾ

Share It

ಗಯಾನಾ: ವೆಸ್ಟ್ ಇಂಡೀಸ್ ದೇಶದ ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಭಾರತ- ಇಂಗ್ಲೆಂಡ್ ನಡುವಿನ ಟಿ20 ವಿಶ್ವಕಪ್​ನ 2ನೇ ಸೆಮಿಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ಪಡೆ 68 ರನ್ ಗಳಿಂದ ಗೆದ್ದು ಫೈನಲ್ ಪ್ರವೇಶಿಸಿತು.

ಈ ಮೂಲಕ ಟೀಂ ಇಂಡಿಯಾ ಟಿ-20 ವಿಶ್ವಕಪ್ ಇತಿಹಾಸದಲ್ಲಿ ಇದು 3ನೇ ಬಾರಿಗೆ ಫೈನಲ್​ಗೇರಿದ ಸಾಧನೆ ಮಾಡಿತು. ಇದರ ಜೊತೆಗೆ ಅಜೇಯ ತಂಡವಾಗಿ ಫೈನಲ್​ಗೆ ಲಗ್ಗೆ ಇಟ್ಟಿರುವ ಟೀಂ ಇಂಡಿಯಾ, ಕಳೆದ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಇದೇ ಇಂಗ್ಲೆಂಡ್ ವಿರುದ್ಧ ಎದುರಿಸಿದ್ದ 10 ವಿಕೆಟ್​ಗಳ ಹೀನಾಯ ಸೋಲಿಗೆ ಸರಿಯಾಗಿ ಸೇಡು ತೀರಿಸಿಕೊಂಡಿತು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್​ಗಳಲ್ಲಿ 171 ರನ್ ಕಲೆಹಾಕಿತು. ಆದರೆ ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ 16.4 ಓವರ್‌ಗಳಲ್ಲಿ 103 ರನ್‌ಗಳಿಗೆ ಆಲೌಟ್ ಆಯಿತು. ಇದೀಗ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.

ಮತ್ತೆ ಓಪನರ್ ಕೊಹ್ಲಿ ವಿಫಲ!
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಗೆ ಎಂದಿನಂತೆ ಓಪನರ್ ಕೊಹ್ಲಿ ಕೇವಲ 9 ರನ್ ಗಳಿಸಿ ಔಟಾದರು. ಬಳಿಕ ಬಂದ ಪಂತ್ ಕೂಡ 6 ರನ್ ಗಳಿಸಿ ಔಟಾದಾಗ ಭಾರತದ ಸ್ಕೋರ್ 40 ರನ್ ಗೆ 2 ವಿಕೆಟ್ ಆಗಿತ್ತು.

ಆದರೆ ನಂತರ ಟೀಂ ಇಂಡಿಯಾಕ್ಕೆ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿ 3ನೇ ವಿಕೆಟ್ ಗೆ 73 ರನ್‌ ಕಲೆ ಹಾಕಿ ಟೀಂ ಇಂಡಿಯಾ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ಕಾರಣರಾದರು.

ರೋಹಿತ್ ಶರ್ಮಾ 57 ರನ್ ಹಾಗೂ ಸೂರ್ಯಕುಮಾರ್ ಯಾದವ್ 47 ರನ್ ಹೊಡೆದು ಔಟಾದರು. ಕೊನೆಯಲ್ಲಿ ರವೀಂದ್ರ ಜಡೇಜಾ ಔಟಾಗದೆ 17 ರನ್ ಬಾರಿಸಿದರೆ, ಹಾರ್ದಿಕ್ ಪಾಂಡ್ಯ 23 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಕಟ್ಟಿದರು. ಅಕ್ಷರ್ ಪಟೇಲ್ 10 ರನ್ ಹೊಡೆದರು. ಇಂಗ್ಲೆಂಡ್ ಪರ ಬೌಲ್ ಮಾಡಿದ 6 ಬೌಲರ್​ಗಳ ಪೈಕಿ ನಾಲ್ವರು ತಲಾ 1 ವಿಕೆಟ್ ಪಡೆದರೆ, ಕ್ರಿಸ್ ಜೋರ್ಡಾನ್ 3 ವಿಕೆಟ್ ಪಡೆದರು.

ಬಳಿಕ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ಟೀಂ ಇಂಡಿಯಾ ಸ್ಪಿನ್ನರ್ ಅಕ್ಸರ್ ಪಟೇಲ್ ಅವರ ಸ್ಪಿನ್ ಬೌಲಿಂಗ್ ಎದುರಿಸಲಾಗದೆ ಆರಂಭದಲ್ಲೇ 4 ವಿಕೆಟ್ ಕಳೆದುಕೊಂಡಿತು. ಆದರೆ ನಾಯಕ ಜೋಶ್ ಬಟ್ಲರ್ 23 ರನ್, ಹ್ಯಾರ್ರಿ ಬ್ರೂಕ್ಸ್ 21 ರನ್ ಹಾಗೂ ಜೋಫ್ರಾ ಅರ್ಚರ್ 25 ರನ್ ಗಳಿಸಿ ಒಂದಿಷ್ಟು ಪ್ರತಿರೋಧ ತೋರಿದರು. ಟೀಂ ಇಂಡಿಯಾ ಪರ ಸ್ಪಿನ್ನರ್ ಕುಲದೀಪ್ ಯಾದವ್ 3 ವಿಕೆಟ್, ವೇಗದ ಬೌಲರ್ ಬೂಮ್ರಾ 2 ವಿಕೆಟ್ ಗಳಿಸಿ ಗೆಲುವಿಗೆ ನೆರವಾದರು.
ಕೊನೆಯಲ್ಲಿ ಅಕ್ಸರ್ ಪಟೇಲ್ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು.

ಜೂನ್ 29 ರಂದು ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ಈ ಟೂರ್ನಿಯಲ್ಲಿ ಮತ್ತೊಂದು ಅಜೇಯ ತಂಡ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಈ ಪಂದ್ಯ ವೆಸ್ಟ್ ಇಂಡೀಸ್ ದೇಶದ ಬಾರ್ಬಡೋಸ್ ನ ಬ್ರಿಡ್ಜ್ ಟೌನ್ ಸ್ಟೇಡಿಯಂನಲ್ಲಿ ನಡೆಯಲಿದೆ.


Share It

You cannot copy content of this page