ಶಿವರಾಜು. ವೈ. ಪಿ
ಎಲೆರಾಂಪುರ.
ಪಾಲೇಕಲೆ (ಶ್ರೀಲಂಕಾ) : ಮಂಗಳವಾರ ಪಾಲೇಕಲೆ ಇಂಟರ್ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಮೂರು ಟಿ 20 ಪಂದ್ಯಗಳ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ಶ್ರೀಲಂಕಾ ವಿರುದ್ಧ ಸೂಪರ್ ಓವರ್ ನಲ್ಲಿ ಭರ್ಜರಿ ಜಯಗಳಿಸಿತು. ಟೀಮ್ ಇಂಡಿಯಾ ಆತಿಥೇಯ ರಾಷ್ಟ್ರವಾದ ಶ್ರೀಲಂಕಾವನ್ನು 3 ಪಂದ್ಯಗಳಲ್ಲೂ ಸೋಲಿಸುವ ಮೂಲಕ ಸರಣಿಯನ್ನು 3-0 ಅಂತರದಿಂದ ವೈಟ್ ವಾಶ್ ಮಾಡಿದೆ .
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಚರಿತ್ ಅಸಲಂಕ ನಾಯಕತ್ವದ ಶ್ರೀಲಂಕಾ ತಂಡ ತನ್ನ ಬೌಲಿಂಗ್ ಪ್ರದರ್ಶನದಿಂದ ಟೀಮ್ ಇಂಡಿಯಾವನ್ನು 20 ಓವರ್ ಗಳಲ್ಲಿ 9 ವಿಕೆಟ್ ಪಡೆದು 137 ರನ್ ಗಳಿಗೆ ಕಟ್ಟಿಹಾಕಲು ಯಶಸ್ವಿಯಾಯಿತು. ಶ್ರೀಲಂಕಾ ಪರ ಬೌಲ್ ಮಾಡಿದ ಮಹೀಷ ತೀಕ್ಷಣ 3 ವಿಕೆಟ್ ಜೊತೆಗೆ ವನಿಂದು ಹಸರಂಗ 2 ವಿಕೆಟ್ ಪಡೆದು ಮಿಂಚಿದರು .
ಸರಣಿಯ ಕೊನೆಯ ಪಂದ್ಯದಲ್ಲಿ ರಿಷಬ್ ಪಂತ್, ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ, ಮತ್ತು ಅರ್ಶದೀಪ್ ಸಿಂಗ್ ಜಾಗದಲ್ಲಿ ಶುಭ್ಮನ್ ಗಿಲ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್ ಮತ್ತು ಖಲೀಲ್ ಅಹಮದ್ ಗೆ ಅವಕಾಶ ಕಲ್ಪಿಸಿ ಕೊಡಲಾಗಿತ್ತು.ಟೀಮ್ ಇಂಡಿಯಾದ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಶುಭ್ಮನ್ ಗಿಲ್ ಹಾಗೂ ಯಶಸ್ವಿ ಜೈಸ್ವಾಲ್ ಶ್ರೀಲಂಕಾದ ಸ್ಲೋ ಪಿಚ್ ಅರಿಯಲು ವಿಫಲರಾದರು. ನಂತರ ಶುಭ್ಮನ್ ಗಿಲ್ 37 ಬಾಲ್ ಗಳಲ್ಲಿ 39 ರನ್ ಮತ್ತು ರಿಯಾನ್ ಪರಾಗ್ 26 ರನ್ ಬಿಟ್ಟರೆ ಇನ್ನು ಯಾವ ಆಟಗಾರರೂ ಸಹ ಉತ್ತಮ ಪ್ರದರ್ಶನ ನೀಡಲಿಲ್ಲ. ಸಂಜು ಸ್ಯಾಮ್ಸನ್ ಕಳೆದ ಮ್ಯಾಚ್ ನಂತೆಯೇ ಮತ್ತೆ ಸೊನ್ನೆಗೆ ಡಕ್ ಔಟ್ ಆಗಿ ಪೆವಿಲಿಯನ್ ಸೇರಿದರು.
ಇನ್ನೂ ಎರಡನೇ ಇನ್ನಿಂಗ್ಸ್ ನಲ್ಲಿ ಶ್ರೀಲಂಕಾ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಪತುಮ್ ನಿಸ್ಸಾಂಕಾ , ಕುಶಾಲ್ ಮೆಂಡಿಸ್, ಮತ್ತು ಕುಶಾಲ್ ಪೆರೇರಾ ಭರ್ಜರಿ ಆರಂಭ ನೀಡಿದರು. ಒಂದ ಹಂತದಲ್ಲಿ ಶ್ರೀಲಂಕಾ ಒಂದು ವಿಕೆಟ್ ನಷ್ಟಕ್ಕೆ ಬರೋಬ್ಬರಿ 110 ರನ್ ಗಳಿಸಿ ಇನ್ನೇನು ಗೆಲುವಿನ ಹಾದಿಯನ್ನು ಹಿಡಿದಿದ್ದರು. ಲಂಕಾಗೆ ಗೆಲ್ಲಲು 30 ಬಾಲ್ ಗಳಲ್ಲಿ ಬೇಕಾಗಿದ್ದಿದ್ದು ಕೇವಲ 28 ರನ್ ಗಳು ಇಂತಹ ಸಮಯದಲ್ಲಿ ಭಾರತದ ಬೌಲರ್ ಗಳು ಕಂಬ್ಯಾಕ್ ಮಾಡಿ ಸೂಪರ್ ಓವರ್ ಆಗುವ ಹಂತಕ್ಕೆ ತಂದಿಟ್ಟರು.
ಸೂಪರ್ ಓವರ್ ನಲ್ಲಿ ಮೊದಲು ಬ್ಯಾಟ್ ಬೀಸಿದ ಶ್ರೀಲಂಕಾ ವಾಷಿಂಗ್ಟನ್ ಸುಂದರ್ ಅವರ ಕೇವಲ 3 ಎಸೆತಗಳಲ್ಲಿ ತನ್ನ ಎರಡೂ ವಿಕೆಟ್ ಗಳನ್ನು ಕಳೆದುಕೊಂಡು ಕೇವಲ 2 ರನ್ ಗಳ ಟಾರ್ಗೆಟ್ ಅನ್ನು ನೀಡಿತ್ತು. ಇದನ್ನು ಬೆನ್ನತ್ತಲು ಬಂದ ನಾಯಕ ಸೂರ್ಯಕುಮಾರ್ ಯಾದವ್ ಮಹೀಶ ತೀಕ್ಷಣ ಓವರ್ ನ ಮೊದಲ ಬಾಲ್ ನಲ್ಲಿಯೇ ಬೌಂಡರಿ ಬಾರಿಸುವ ಮೂಲಕ ಭಾರತಕ್ಕೆ ರೋಚಕ ಜಯ ತಂದು ಕೊಟ್ಟರು.