ಬೆಂಗಳೂರು: ಬೆಂಗಳೂರು ರೇವ್ ಪಾರ್ಟಿಯಲ್ಲಿ ನಶೆಯಲ್ಲಿ ತೇಲಾಡಿದ್ದ ಆರೋಪದಡಿ ತೆಲುಗು ನಟಿ ಹೇಮಾಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ರಾಜಧಾನಿಯ ಆರ್.ಜಿ. ಫಾರ್ಮ್ಹೌಸ್‌ನಲ್ಲಿ ನಡೆದಿದ್ದ ನಶೆ ಪಾರ್ಟಿಯಲ್ಲಿ ಡ್ರಗ್ಸ್ ಸೇವನೆ ಮಾಡಿರುವುದು ಹಾಗೂ ಆ ಪಾರ್ಟಿಯ ನೇತೃತ್ವ ವಹಿಸಿಕೊಂಡಿದ್ದು, ಸಾಬೀತಾದ ಹಿನ್ನೆಲೆಯಲ್ಲಿ ಆಕೆಯನ್ನು ಎಸ್‌ಐಟಿ ಬಂಧನ ಮಾಡಿತ್ತು. ಬಂಧನದ ನಂತರ ಆಕೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿತ್ತು.
ಹೇಮಾ ವಿಚಾರಣೆ ನಡೆಸಿದ ನ್ಯಾಯಧೀಶೆ ಸಲ್ಮಾ ಅವರು, ಡ್ರಗ್ಸ್ ಬಳಕೆ ಪ್ರಕರಣದ ಆರೋಪಿ ಹೇಮಾ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಆದೇಶ ನೀಡಿದರು. ಎಸ್‌ಐಟಿ ಡ್ರಗ್ಸ್ ಪೆಡ್ಲರ್‌ಗಳನ್ನು ಬಂಧಿಸಿದ್ದು, ಹೆಚ್ಚಿನ ವಿಚಾರಣೆಗೆ ಎಸ್‌ಐಟಿ ಕಸ್ಟಡಿಗೆ ಕೊಡುವಂತೆ ಕೇಳಿದ್ದರು.
ಆದರೆ, ನ್ಯಾಯಾಲಯ ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಆಕೆಯನ್ನು ಇದೀಗ ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರ ಮಾಡಲಾಗುತ್ತದೆ. ರೇವ್ ಪಾರ್ಟಿಯಲ್ಲಿ ಸುಮಾರು 102 ಜನರು ಭಾಗವಹಿಸಿದ್ದು, ಕೇಜಿಗಟ್ಟಲೆ ಡ್ರಗ್ಸ್ ಬಳಕೆಯಾಗಿತ್ತು. ದಾಳಿ ನಡೆಸಿದ್ದ ಸಿಸಿಬಿ, ಹೇಮಾಗೆ ನೊಟೀಸ್ ನೀಡಿತ್ತು. ಎರಡು ನೊಟೀಸ್‌ಗೆ ವಿಚಾರಣೆಗೆ ಬರದೆ ತಪ್ಪಿಸಿಕೊಂಡಿದ್ದ ಹೇಮಾ, ಮೂರನೇ ನೊಟೀಸ್‌ಗೆ ಸಿಸಿಬಿ ಮುಂದೆ ಹಾಜರಾಗಿದ್ದರು.
ವಿಚಾರಣೆ ನಡೆಸಿದ ಸಿಸಿಬಿ ಪೊಲೀಸರು ಆಕೆಯನ್ನು ಬಂಧಿಸಿ, ಕೆ.ಜಿ.ಜನರಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ, ನಂತರ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಲಯ ಜೂನ್ 14ರವರೆಗೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಉಗುರು, ಮೂತ್ರದ ಸ್ಯಾಂಪಲ್: ಸಿಸಿಬಿ ನ್ಯಾಯಾಲಯಕ್ಕೆ ಹಾಜರುಪಡಿಸುವ ವೇಳೆ ಹೇಮಾ ಅವರನ್ನು ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿತು. ಈ ವೇಳೆಯ ಹೇಮಾ ಅವರ ರಕ್ತ, ಮೂತ್ರ, ಉಗುರು ಮತ್ತು ಕೂದಲು ಪರೀಕ್ಷೆಗಾಗಿ ಪಡೆದುಕೊಳ್ಳಲಾಗಿದೆ ಎಂಬ ಮಾಹಿತಿಯಿದೆ. ಆಸ್ಪತ್ರೆಯಿಂದ ಹೊರಗೆ ಬಂದಾಗ, ಮಾಧ್ಯಮಗಳ ಮುಂದೆ ಕೂಗಾಡಿದ ಹೇಮಾ ಕೂಡ ಇದೇ ಮಾಹಿತಿಯನ್ನು ಹೊರಹಾಕಿದ್ದಾರೆ. ಆದರೆ, ಈಗಲೇ ಪಾಸಿಟಿವ್, ನೆಗೆಟಿವ್ ಎಂದು ತೋರಿಸಬೇಡಿ ಎಂದು ಕಿಡಿಕಾರಿದ್ದಾರೆ.

