ಬೆಂಗಳೂರು: ಮುಜರಾಯಿ ಇಲಾಖೆ ವ್ಯಾಪ್ತಿಯ 328 ದೇವಸ್ಥಾನಗಳ ಆಸ್ತಿಗಳ ಸಂರಕ್ಷಣೆಗೆ ಸರಕಾರ ಭೂ ವರಾಹ ಯೋಜನೆಯನ್ನು ಜಾರಿಗೊಳಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.
ಸಚಿವ ರಾಮಲಿಂಗಾ ರೆಡ್ಡಿ ಅವರ ಪ್ರಸ್ತಾವನೆಯನ್ನು ಸಚಿವ ಸಂಪುಟ ಅನುಮೋದಿಸಿದ್ದು, ದೇವಸ್ಥಾನಗಳ ಆಸ್ತಿಗಳನ್ನು ಡಿಜಿಟಲ್ ದಾಖಲೆಗಳಾಗಿ ಪರಿವರ್ತಿಸಿ, ಒತ್ತುವರಿಯಾಗಿರುವ ಭೂಮಿಯನ್ನು ಸಂರಕ್ಷಿಸಲು ಅನುಕೂಲವಾಗಲು 15 ಕೋಟಿ. ರು. ಅನುದಾನವನ್ನು ಬಿಡುಗಡೆ ಮಾಡಲು ಒಪ್ಪಿಗೆ ನೀಡಲಾಗಿದೆ.
ರಾಜ್ಯದ ದೇವಸ್ಥಾನಗಳಿಗೆ ಸೇರಿದ ಸುಮಾರು 11 ಸಾವಿರ ಎಕರೆಗೂ ಹೆಚ್ಚು ಭೂಮಿಯನ್ನು ಕಂದಾಯ ಇಲಾಖೆ ಸಹಯೋಗದಲ್ಲಿ ವಶಪಡಿಸಿಕೊಂಡು, ಮುಜರಾಯಿ ಇಲಾಖೆಯ ವ್ಯಾಪ್ತಿಗೆ ತಂದು ಸೂಕ್ತ ದಾಖಲೆಗಳನ್ನು ಸೃಷ್ಡಿಸಲಾಗಿದೆ. ಈ ದಾಖಲೆಗಳಿಗೆ ಡಿಜಿಟಲ್ ರೂಪ ನೀಡಿ, ಆಸ್ತಿಗಳ ಒತ್ಯುವರಿ ತಡೆದು, ದೇವಸ್ಥಾನಗಳ ಆಸ್ತಿಯನ್ನು ಸಂರಕ್ಷಿಸಲು ಭೂ ವರಾಹ ಯೋಜನೆ ರೂಪಿಸಲಾಗಿದೆ. ಇದೀಗ ಈ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಅನುದಾನ ನಿಗದಿ ಮಾಡಿದೆ.
ರಾಜ್ಯದಲ್ಲಿ ಸುಮಾರು 35,000 ಮುಜರಾಯಿ ದೇವಸ್ಥಾನಗಳಿದ್ದು, ಬಹುತೇಕ ಎಲ್ಲ ದೇವಸ್ಥಾನಗಳ ಹೆಸರಿನಲ್ಲಿ ಆಸ್ತಿಗಳಿವೆ. ಆದರೆ, ಇವುಗಳೆಲ್ಲವೂ ದಾಖಲೆಗಳಿಲ್ಲದ ಕಾರಣ ಒತ್ತುವರಿದಾರರ ಪಾಲಾಗಿತ್ತು. ಇದೀಗ ಇವೆಲ್ಲವನ್ನು ಪತ್ತೆಹಚ್ಚಿ ದಾಖಲೆಗಳನ್ನು ಸೃಷ್ಡಿಸುವ ಕೆಲಸ ಮಾಡಲಾಗಿದೆ. ಇದೀಗ 328 ಪ್ರಮುಖ ದೇವಸ್ಥಾನಗಳ ಆಸ್ತಿಗಳ ಡಿಜಿಡಲೀಕರಣಕ್ಕೆ ಯೋಜನೆ ರೂಪಿಸಲಾಗಿದೆ.

