ಬೆಂಗಳೂರು: ಐಟಿ ಅಧಿಕಾರಿಗಳ ಕಿರುಕುಳದಿಂದ ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿ.ಜೆ.ರಾಯ್ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಂತೆ ಕಚೇರಿಯಲ್ಲಿದ್ದ ಐಟಿ ಅಧಿಕಾರಿಗಳು ಪೊಲೀಸರ ಭದ್ರತೆಯಲ್ಲಿ ಕಚೇರಿಯಿಂದ ಹೊರನಡೆದಿದ್ದಾರೆ.
ಲ್ಯಾಂಗ್ಪೋರ್ಡ್ ರಸ್ತೆಯ ಕಾನ್ಫಿಡೆಂಟ್ ಗ್ರೂಪ್ ಕಚೇರಿಯಲ್ಲಿ ಐಟಿ ದಾಳಿಯ ವೇಳೆ ಮತ್ತೊಂದು ಕೊಠಡಿಗೆ ದಾಖಲೆಗಳನ್ನು ತರಲು ಹೋಗಿದ್ದ ಸಿ.ಜೆ.ರಾಯ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಅನಂತರ ಐಟಿ ಅಧಿಕಾರಿಗಳು ಅಲ್ಲಿಂದ ಪೊಲೀಸರ ಭದ್ರತೆಯಲ್ಲಿ ಕಾರಿನಿಂದ ತೆರಳಿದ್ದಾರೆ.
ಐಟಿ ಅಧಿಕಾರಿಗಳು ಕಚೇರಿ ಬಿಡುವ ಮೊದಲು ಪೊಲೀಸರು ಆತ್ಮಹತ್ಯೆಯ ಕುರಿತು ಅವರನ್ನು ವಿಚಾರಣೆ ನಡೆಸಿದರು ಎಂಬ ಮಾಹಿತಿ ಲಭ್ಯವಾಗಿದೆ. ಅವರಿಂದ ಯಾವ ಪ್ರಶ್ನೆಗಳಿಗೆ ಉತ್ತರ ಬಯಸಿದ್ದಿರಿ? ಅವರ ಮನಸ್ಥಿತಿ ಹೇಗಿತ್ತು ಎಂಬಿತ್ಯಾದಿ ಮಾಹಿತಿಗಳನ್ನು ಕಲೆಹಾಕಿದ್ದಾರೆ. ಐಟಿ ಅಧಿಕಾರಿಗಳ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡರಾ ಎಂಬ ಬಗ್ಗೆಯೂ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ ಎನ್ನಲಾಗಿದೆ.

