ಸಾಕ್ಷ್ಯ ನಾಶಕ್ಕೆ ಬಂದವರೇ ಇಂದು ಪ್ರಮುಖ ಸಾಕ್ಷಿ
ಮತ್ತಷ್ಟು ಸಂಕಷ್ಟ ತಂದೊಡ್ಡುತ್ತಿವೆ ಪ್ರಕರಣದ ಸಾಕ್ಷಿಗಳು
ಬೆಂಗಳೂರು: ಡಿ ಬಾಸ್ ದರ್ಶನ್ಗೆ ದಿನೇದಿನೆ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದು, ದರ್ಶನ್ ಗ್ಯಾಂಗ್ ಶವವನ್ನು ಎಸೆದು ಸಾಕ್ಷ್ಯ ನಾಶ ಮಾಡಲು ಸಿದ್ಧಪಡಿಸಿದ್ದ ತಂಡವೇ ಇದೀಗ ಡಿ ಗ್ಯಾಂಗ್ ಪಾಲಿಗೆ ಡೇಂಜರ್ ಆಗುತ್ತಿದೆ.
ಡಿ ಗ್ಯಾಂಗ್ ರೇಣುಕಾ ಸ್ವಾಮಿಯನ್ನು ಚಿತ್ರದುರ್ಗದಿಂದ ಕರೆತಂದು ಥಳಿಸಿ, ಕೊಲೆ ಮಾಡಿದ ನಂತರ ಆತನ ಶವವನ್ನು ದೂರ ಎಲ್ಲಾದರೂ ಎಸೆಯಲು ಮೂವರನ್ನು ಫಿಕ್ಸ್ ಮಾಡಲಾಗಿತ್ತು. ಆ ಮೂವರ ಹೇಳಿಕೆಯಲ್ಲಿ ಸಾಮ್ಯತೆಯಿಲ್ಲದ ಕಾರಣದಿಂದಲೇ ಇಡೀ ಪ್ರಕರಣ ತೆರೆದುಕೊಂಡಿತ್ತು. ಇದೀಗ ಅವರು ನುಡಿದಿರುವ ಸಾಕ್ಷ್ಯ ದರ್ಶನ್ ಮತ್ತು ಆಪ್ತರಿಗೆ ಕುಣಿಕೆಯಾಗಿ ಪರಿಣಮಿಸಲಿದೆ ಎಂದು ಹೇಳಲಾಗುತ್ತಿದೆ.
ಶರಣಾಗಿದ್ದ ಮೂವರು ಕೂಡ ನಮ್ಮದೇನು ತಪ್ಪಿಲ್ಲ, ದುಡ್ಡು ಕೊಡ್ತೀವಿ ಎಂದರು. ಅದಕ್ಕೆ ಬಂದು ಶವ ಎಸೆಯುವ ಕೆಲಸ ಮಾಡಿದ್ದೇವೆ ಎಂದು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ. ಇದೇ ಹೇಳಿಕೆಯನ್ನು ಈಗಾಗಲೇ ನ್ಯಾಯಾಧೀಶರ ಮುಂದೆ ಪೊಲೀಸರು ಕೊಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ದರ್ಶನ್ಗೆ ಕಂಟಕವಾಗಲಿದೆ.
ಇನ್ನು ಎಫ್ಎಸ್ಎಲ್ ತೆಗೆದುಕೊಂಡು ಹೋಗಿದ್ದ, ರಕ್ತದ ಕಲೆ, ಬೆರಳಚ್ಚು ಮಾದರಿಗಳೆಲ್ಲವೂ ದರ್ಶನ್ ಮತ್ತು ಅವರ ಆಪ್ತರ ಬೆರಳಚ್ಚುಗಳಿಗೆ ತಾಳೆಯಾಗುತ್ತಿವೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಪೊಲೀಸರು ತಾಂತ್ರಿಕ ಸಾಕ್ಷಿಗಳನ್ನು ಒಟ್ಟುಗೂಡಿಸಿ, ಡಿ ಗ್ಯಾಂಗ್ ಮೇಲೆ ಚಾರ್ಜ್ಶೀಟ್ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.
ಕೊಲೆ ಪ್ರಕರಣ ಮುಚ್ಚಿ ಹಾಕಲು ಬಳಸಿದ ಯುವಕರು ಮತ್ತು ಕೊಲೆ ಮುಚಿಹಾಕಲು ಬಳಕೆ ಮಾಡುತ್ತಿದ್ದ ಹಣ ದರ್ಶನ್ ಅವರನ್ನು ಮತ್ತಷ್ಟು ಕಂಟಕಕ್ಕೆ ದೂಡಿದೆ. ಹಣ ಪಡೆದ ಪ್ರಕರಣದಲ್ಲಿ ಮಾಜಿ ಉಪಮೇಯರ್ ಮೋಹನ್ ರಾಜು ವಿಚಾರಣೆ ಮಾಡಲಾಗಿದೆ. ಹೀಗೆ, ದರ್ಶನ್ ಮಾಡಿದ್ದೆಲ್ಲವೂ ಇದೀಗ ಉಲ್ಟಾ ಹೊಡೆದಿದ್ದು, ಮುಂದೆ ಅವರಿಗೆ ಕೊಲೆ ಪ್ರಕರಣ ಮತ್ತಷ್ಟು ಕಗ್ಗಂಟಾಗಲಿದೆ.

