ಭದ್ರಾವತಿ: ಮನೆಯಲ್ಲಿ ಕೊಲೆಯಾಗಿ ಬಿದ್ದಿದ್ದ ದಂಪತಿಯ ಸಾವಿಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಕೊಲೆಯಾದ ವ್ಯಕ್ತಿಯ ತಮ್ಮನ ಮಗನೇ ಇಂಜೆಕ್ಷನ್ ನೀಡಿ ಕೊಲೆ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಭದ್ರಾವತಿಯಲ್ಲಿ ಎರಡು ದಿನದ ಹಿಂದೆ ವಯೋವೃದ್ಧ ದಂಪತಿಗಳಾದ ಚಂದ್ರಪ್ಪ ಮತ್ತು ಜಯಮ್ಮ ಎಂಬುವವರು ಮನೆಯಲ್ಲಿ ಸಾವನ್ನಪ್ಪಿದ್ದರು. ಮನೆಯಲ್ಲಿದ್ದ ಚಿನ್ನಾಭರಣಗಳು ಮತ್ತು ಮೃತರ ಮೈಮೇಲಿನ ಚಿನ್ನಭಾರಣಗಳು ಕಾಣೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಯಾರೋ ಕಳ್ಳತನ ಮಾಡಲು ಬಂದವರು ಕೊಲೆ ಮಾಡಿ, ಚಿನ್ನಾಭರಣ ದೋಚಿರುವುದಾಗಿ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು.
ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ಪೊಲೀಸರಿಗೆ ಶಾಕಿಂಗ್ ಮಾಹಿತಿ ಸಿಕ್ಕಿದ್ದು, ಮೃತ ಚಂದ್ರಪ್ಪನ ತಮ್ಮನ ಮಗನೇ ಕೊಲೆ ಮಾಡಿರುವುದು ಗೊತ್ತಾಗಿದೆ. ಅದಕ್ಕಿಂತಲೂ ಶಾಕಿಂಗ್ ಸುದ್ದಿಯೆಂದರೆ, ಕೊಲೆ ಮಾಡಿದ ವ್ಯಕ್ತಿ ಮಲ್ಲೇಶ್, ವೈದ್ಯನಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದೆ.
ಡಾ. ಮಲ್ಲೇಶ್ ಬಹಳ ಸಾಲ ಮಾಡಿಕೊಂಡಿದ್ದು, ಆತನ ಸಾಲ ತೀರಿಸುವ ಸಲುವಾಗಿ ದೊಡ್ಡಪ್ಪ-ದೊಡ್ಡಮ್ಮನನ್ನು ಕೊಲೆ ಮಾಡಿದ್ದಾನೆ. ಅವರಿಗೆ ಇಂಜೆಕ್ಷನ್ ನೀಡಿ ಕೊಲೆ ಮಾಡಿರುವುದು ವಐದ್ಯಕೀಯ ಪರೀಕ್ಷೆಗಳಿಂದ ದೃಢಪಟ್ಟಿದೆ. ಹೀಗಾಗಿ, ಮಲ್ಲೇಶ್ ನನ್ನು ಭದ್ರಾವತಿ ಓಲ್ಡ್ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

