ದಲಿತರಿಗೆ ಮೀಸಲಿಟ್ಟಿದ್ದ 14,797 ಕೋಟಿ ರು. ಅನುದಾನ ಬಳಕೆ
ಸರಕಾರದ ನಿರ್ಧಾರದಿಂದ ದಲಿತರ ಉದ್ಧಾರ ಹೇಗೆ ಸಾಧ್ಯ?
ಬೆಂಗಳೂರು: ರಾಜ್ಯಾದ್ಯಂತ ಗ್ಯಾರಂಟಿ ಕೊಟ್ಟಿದ್ದೇವೆ ಎಂದು ಬೀಗುತ್ತಿರುವ ರಾಜ್ಯ ಸರಕಾರ ಅದಕ್ಕಾಗಿ ಬಡ ದಲಿತರಿಗೆ ಮೀಸಲಿಟ್ಟಿದ್ದ ಅನುದಾನ ಬಳಸಿಕೊಂಡು, ದಲಿತರ ಅಭಿವೃದ್ಧಿ ಕುಂಠಿತಗೊಳಿಸುವ ಕೆಲಸ ಮಾಡಿದೆ.
ಗ್ಯಾರಂಟಿ ಯೋಜನೆಗಳಿಗೆ ಎಸ್‌ಸಿಎಸ್‌ಟಿಪಿ ಮತ್ತು ಟಿಎಸ್‌ಪಿಗೆ ಮೀಸಲಿಟ್ಟಿರುವ ಹಣವನ್ನು ಸರಕಾರದ ಗ್ಯಾರಂಟಿಗಳಾದ ಗೃಹಲಕ್ಷ್ಮಿ ಯೋಜನೆ, ಭಾಗ್ಯಲಕ್ಷ್ಮಿ ಯೋಜನೆ, ಶಕ್ತಿ ಯೋಜನೆ, ಯುವನಿಧಿ ಯೋಜನೆ ಮತ್ತು ಗೃಹಜ್ಯೋತಿ ಯೋಜನೆಗಳಿಗೆ ಬಳಕೆ ಮಾಡಲಾಗುತ್ತಿದೆ.
ಸರಕಾರವೇ ನೀಡಿರುವ ಅಂಕಿ-ಅಂಶಗಳ ಪ್ರಕಾರ ವಿವಿಧ ಇಲಾಖೆಗಳಿಗೆ ಗ್ಯಾರಂಟಿ ಜಾರಿಗಾಗಿ ಎಸ್‌ಸಿಟಿಪಿ, ಟಿಎಸ್‌ಪಿಯಡಿ ಮೀಸಲಿಟ್ಟಿದ್ದ 14,797 ಕೋಟಿ ರು. ಅನುದಾನವನ್ನು ಬಳಕೆ ಮಾಡಲಾಗಿದೆ.2024-25 ರಲ್ಲಿ ದಲಿತರ ಅಭಿವೃದ್ಧಿಗಾಗಿ 39121.46 ಕೋಟಿ ರು ಅನುದಾನ ಮೀಸಲಿಡಲಾಗಿತ್ತು.
ಈ ಅನುದಾನದಲ್ಲಿ ಎರಡು ಹಂತದಲ್ಲಿ ಸರಕಾರ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳುತ್ತಿದೆ. ಗ್ಯಾರಂಟಿ ಫಲಾನುಭವಿಗಳಲ್ಲಿಯೂ ದಲಿತರಿದ್ದಾರೆ. ಹೀಗಾಗಿ, ಅನುದಾನ ಬಳಕೆ ಮಾಡುತ್ತೇವೆ ಎಂಬುದು ಸರಕಾರದ ವಾದವಾದರೆ, ದಲಿತರ ಹಣವನ್ನು ಎಲ್ಲ ವರ್ಗದ ಗ್ಯಾರಂಟಿ ಫಲಾನುಭವಿಗಳಿಗೂ ಹಂಚಿಕೆ ಮಾಡಿರುವುದನ್ನು ಬಿಜೆಪಿ ಖಂಡಿಸಿದೆ.
ಗೃಹಲಕ್ಷ್ಮಿ ಯೋಜನೆಗೆ 7881 ಕೋಟಿ ಮತ್ತು ಭಾಗ್ಯಲಕ್ಷ್ಮಿ ಯೋಜನೆಗೆ 70.28 ಕೋಟಿ, ಗೃಹಜ್ಯೋತಿ ಯೋಜನೆಗೆ 7881 ಕೋಟಿ, ಶಕ್ತಿ ಯೋಜನೆಗೆ 1451 ಕೋಟಿ, ಅನ್ನಭಾಗ್ಯ ಯೋಜನೆಗೆ 448 ಮತ್ತು 2187 ಕೋಟಿ, ಯುವನಿಧಿ ಯೋಜನೆಗೆ 175.5 ಕೋಟಿ ಅನುದಾನ ಬಳಸಿಕೊಂಡಿದೆ.
ಅನುದಾನ ಬಳಕೆ ವಿವರ:
ಯೋಜನೆ SCTP/TSP ಒಟ್ಟು(ಕೋಟಿ)
ಗೃಹಲಕ್ಷ್ಮಿ: 5546.53/2335.38 7881.91
ಗೃಹಜ್ಯೋತಿ: 1770.45/815.48 2585.93
ಶಕ್ತಿ ಯೋಜನೆ: 1001.00/450.45 1451.45
ಅನ್ನಭಾಗ್ಯ: 315.32/132.83 448.15
(ನೇರನಗದು) 1539.18/648.41 2187.59
ಯುವನಿದಿ: 123.50/52.00 175.50
ಗ್ಯಾರಂಟಿ ಯೋಜನೆಯ ಫಲಾನುಭವಿಗಳಲ್ಲಿ ದಲಿತರೇ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಹೀಗಾಗಿ, ಎಸ್‌ಸಿಟಿಪಿ ಮತ್ತು ಟಿಎಸ್‌ಪಿ ಅನುದಾನವನ್ನು ಬಳಕೆ ಮಾಡಲಾಗುತ್ತಿದೆ. ಪ್ರತಿ ಇಲಾಖೆಗೆ ಎಷ್ಟೆಷ್ಟು ಹಣ ಎಂದು ನಿಗದಿ ಮಾಡಿದ್ದೇವೆ.
- ಸಿದ್ದರಾಮಯ್ಯ, ಮುಖ್ಯಮಂತ್ರಿ
ಯಾವ ನೈತಿಕತೆ ಮೇಲೆ ಈ ಹಣವನ್ನು ಖರ್ಚು ಮಾಡುತ್ತಿದ್ದಾರೆ. ಅಂಬೇಡ್ಕರ್ ಸಂವಿಧಾನಕ್ಕೆ ಇದು ಮೋಸ ಮಾಡಿದಂತಾಗಿದೆ. ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕಾಗುತ್ತದೆ.
- ಎನ್.ರವಿಕುಮಾರ್, ವಿಧಾನ ಪರಿಷತ್ ಸದಸ್ಯ