ಬಿಜೆಪಿ-ಜೆಡಿಎಸ್ ಕಾಂಬಿನೇಷನ್ ವರ್ಕ್ಔಟ್ ಆದ ಕ್ಷೇತ್ರಗಳು
ಬೆಂಗಳೂರು: ಜೆಡಿಎಸ್ ಜತೆಗೆ ಬಿಜೆಪಿ ಮೈತ್ರಿ ಮಾಡಿಕೊಂಡ ಪರಿಣಾಮ ಯಾರಿಗೆ ಲಾಭ ಎಂಬ ಚರ್ಚೆಗಳು ಲೋಕಸಭಾ ಚುನಾವಣೆ ಆರಂಭದಿAದಲೂ ನಡೆಯುತ್ತಿದ್ದವು.
ಆದರೆ, ಮೈತ್ರಿಯಿಂದ ಲಾಭ ಮಾಡಿಕೊಂಡರ‍್ಯಾರು ಎಂಬುದು ಈ ಚುನಾವಣೆ ಫಲಿತಾಂಶದ ನಂತರ ಜಗಜ್ಜಾಹೀರಾಗಿದೆ. ಮೈತ್ರಿಯಿಂದಾಗಿಯೇ ಒಕ್ಕಲಿಗ ಪ್ರಾಬಲ್ಯದ ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ಭರಪೂರ ಲಾಭವಾಗಿದೆ. ಜೆಡಿಎಸ್‌ನ ಸಾಂಪ್ರದಾಯಿಕ ಕ್ಷೇತ್ರಗಳಾದ ಮಂಡ್ಯ, ಹಾಸನ ಮತ್ತು ಕೋಲಾರ ಜಿಲ್ಲೆಯಲ್ಲಿ ಬಿಜೆಪಿ ಗೆಲುವು ಸಾಧ್ಯವೇನು ಇರಲಿಲ್ಲ. ಹೀಗಾಗಿ, ಆ ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದ್ದು ಬಿಜೆಪಿಗೆ ಲಾಭವಾದಂತೆಯೇ ಆಗಿದೆ.
ಜೆಡಿಎಸ್-ಬಿಜೆಪಿ ಮೈತ್ರಿ ಮೈಸೂರಿನಲ್ಲಿ ಮಾಮೂಲಿನಂತೆಯೇ ವರ್ಕ್ ಆಗಿದೆ. ಇನ್ನು ಪ್ರಮುಖವಾಗಿ ಮೈತ್ರಿ ವರ್ಕ್ ಆಗಿರುವುದು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ. ಇಲ್ಲಿ ಸ್ವತಃ ಜೆಡಿಎಸ್ ಪಕ್ಷದ ನಾಯಕರ ಅಳಿಯ ಬಿಜೆಪಿ ಅಭ್ಯರ್ಥಿಯಾಗಿದ್ದು, ಜೆಡಿಎಸ್ ಮೈತ್ರಿಯ ಲಾಭ ಸಂಪೂರ್ಣವಾಗಿ ಬಿಜೆಪಿಗೆ ಸಿಕ್ಕಿದೆ. ಇದೇ ಕಾರಣದಿಂದ ಎರಡು ಲಕ್ಷದ ಅಂತರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.
ನಗರ ಭಾಗದ ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿ ನಗರದಲ್ಲಿ ಮಾತ್ರ ಬಿಜೆಪಿಗೆ ಭದ್ರ ನೆಲೆಯಿತ್ತು. ಜೆಡಿಎಸ್ ರಾಮನಗರ, ಚನ್ನಪಟ್ಟಣ, ಕನಕಪುರ ಮತ್ತು ಆನೇಕಲ್‌ನಲ್ಲಿದ್ದ ತನ್ನ ಶಕ್ತಿಯನ್ನು ಬಿಜೆಪಿಗೆ ಧಾರೆಯೆರೆಯುವ ಮೂಲಕ ಇಷ್ಟು ದೊಡ್ಡ ಪ್ರಮಾಣದ ಅಂತರವನ್ನು ಗಳಿಸಿಕೊಳ್ಳುವಂತೆ ಮಾಡಿದೆ. ಹೀಗಾಗಿ, ಮೈತ್ರಿ, ಕೆಪಿಸಿಸಿ ರಾಜ್ಯಾಧ್ಯಕ್ಷರು ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಗರ್ವಭಂಗಕ್ಕೂ ಕಾರಣವಾಗಿದೆ. ಜೆಡಿಎಸ್ ಡಿಕೆಶಿ ಮೇಲಿನ ಸಿಟ್ಟನ್ನು ತೀರಿಸಿಕೊಂಡAತೆಯೂ ಆಗಿದೆ.
ಉಳಿದಂತೆ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಎಲ್ಲ ಕಾಂಗ್ರೆಸ್ ಶಾಸಕರಿದ್ದರೂ, ಜೆಡಿಎಸ್ ಮೈತ್ರಿ ಬಿಜೆಪಿಯನ್ನು ಗೆಲ್ಲಿಸಿದೆ. ಜೆಡಿಎಸ್ ಪರವಾಗಿದ್ದ ಮತದಾರರು ಬಿಜೆಪಿಗೆ ಬಂದ ಪರಿಣಾಮವೇ ಡಾ.ಸುಧಾಕರ್ ಗೆಲುವಿಗೆ ಕಾರಣವಾಗಿದೆ. ಅದರಂತೆಯೇ ತುಮಕೂರಿನಲ್ಲಿಯೂ ಜೆಡಿಎಸ್ ಮೈತ್ರಿ ಬಿಜೆಪಿಗೆ ಸುಲಭ ಗೆಲುವು ತರಿಸಿದೆ ಎನ್ನಬಹುದು.

