೩೫೦ ಶಾಸಕರನ್ನು ಪಕ್ಷಾಂತರ ಮಾಡಿರೋ ಬಿಜೆಪಿಗೆ ತಿರುಗೇಟು
ಜೆಡಿಎಸ್-ಬಿಜೆಪಿ ಮೈತ್ರಿಗೆ 10 ಸ್ಥಾನವೂ ಬರಲ್ಲ: ರಾಮಲಿಂಗಾ ರೆಡ್ಡಿ
ಬೆಳಗಾವಿ: ದೇಶಾದ್ಯಂತ 350 ಕ್ಕೂ ಹೆಚ್ಚು ಶಾಸಕರು ಮತ್ತು ಸಂಸದರನ್ನು ಪಕ್ಷಾಂತರ ಮಾಡಿಸಿರುವ ಬಿಜೆಪಿಗೆ, ಚುನಾವಣೆ ನಂತರ ಇದೇ ಅಂಶ ತಿರುಗುಬಾಣವಾಗಲಿದೆ, ಬಿಜೆಪಿಯ ಹಲವಾರು ಜನ ಪಕ್ಷಬಿಟ್ಟು ಬೇರೆ ಪಕ್ಷದ ಕಡೆಗೆ ರ‍್ತಾರೆ ನೋಡ್ತಾ ಇರಿ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಎಚ್ಚರಿಕೆ ನಿಡಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಗೆ ಸಿಂಗಲ್ ಡಿಜಿಟ್ ಸ್ಥಾನ ಬರುತ್ತವೆ. ದೇಶದಲ್ಲೂ ಬಿಜೆಪಿ ಸರ್ಕಾರ ಬರುವುದಿಲ್ಲ. ಚುನಾವಣೆಯಲ್ಲಿ ಸೋತ ಬಳಿಕ ಬಿಜೆಪಿಯವರೇ ಪಕ್ಷಾಂತರ ಮಾಡುತ್ತಾರೆ. ವಿಪಕ್ಷದ 350 ಶಾಸಕರು ಮತ್ತು ಸಂಸದರನ್ನು ಕೇಂದ್ರ ಬಿಜೆಪಿ ಪಕ್ಷಾಂತರ ಮಾಡಿಸಿತ್ತು. ಈಗ ಅದೇ ಅವರಿಗೆ ತಿರುಗು ಬಾಣವಾಗಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭವಿಷ್ಯ ನುಡಿದಿದ್ದಾರೆ.
೨೫ಕ್ಕೂ ಹೆಚ್ಚು ಸ್ಥಾನ ಗೆಲ್ತೀವಿ ಎನ್ನುತ್ತಿರುವ ಬಿಜೆಪಿ-ಜೆಡಿಎಸ್ ಮೈತ್ರಿ ನಾಯಕರಿಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಖಡಕ್ ತಿರುಗೇಟು ನೀಡಿದ್ದು, ಮೈತ್ರಿ ಪಕ್ಷಗಳ ಒಟ್ಟು ಸ್ಥಾನ ಎರಡಂಕಿ ಮುಟ್ಟಲ್ಲ ಎಂದು ಕುಟುಕಿದ್ದಾರೆ.
ಬಿಜೆಪಿ ನಾಯಕರು ಸರಕಾರ ಬೀಳುತ್ತೆ ಅಂತ ಹಗಲುಗನಸು ಕಾಣುತ್ತಿದ್ದಾರೆ. ಹಗಲುಗನಸು ಕಾಣುವವರಿಗೆ ನಾವು ಬೇಡ ಅನ್ನೋಕೆ ಆಗುತ್ತಾ..? ಕನಸು ಕಾಣಲಿ ಬಿಡಿ. ಆದರೆ ಜೂನ್ 4 ಕ್ಕೆ ಬರುವ ಫಲಿತಾಂಶದಲ್ಲಿ ನಮಗೆ, ಬಿಜೆಪಿ ಮತ್ತು ಜೆಡಿಎಸ್ ಪಕ್ಷಕ್ಕೆ ಎಷ್ಟು ಸ್ಥಾನ ಬರುತ್ತವೆ ಎಂಬುದು ಗೊತ್ತಾಗುತ್ತದೆ. ಬಿಜೆಪಿ, ಜೆಡಿಎಸ್‌ಗೆ ಸಿಂಗಲ್ ಡಿಜಿಟ್ ಸ್ಥಾನ ಸಿಗುತ್ತೆ. ದೇಶದಲ್ಲಿ ಬಿಜೆಪಿ ಸರ್ಕಾರ ಬರುತ್ತದೆ ಎಂದು ಕಾಣಿಸುತ್ತಿಲ್ಲ. ಅಲ್ಲಿಯೂ ಕೂಡ ಬದಲಾವಣೆ ಆಗುತ್ತದೆ. ರಾಜ್ಯದಲ್ಲಿ ನಮ್ಮ ಸರ್ಕಾರವೇ ಮುಂದುವರಿಯುತ್ತದೆ ಎಂದರು.
ರಾಜ್ಯದಲ್ಲಿ ಒಂದೇ ಪಕ್ಷ ಸರ್ಕಾರ ನಡೆಸುತ್ತಿದೆ. ನಮ್ಮಲ್ಲಿ ಒಗ್ಗಟ್ಟಿದೆ, ಲೋಕಸಭೆ ಚುನಾವಣೆ ಬಳಿಕ ಅವರ ಪಕ್ಷದಲ್ಲಿ ಎಷ್ಟು ಜನ ಇರುತ್ತಾರೆ..? ಎಂಬುದನ್ನು ಅವರು ನೋಡಿಕೊಳ್ಳಬೇಕು. ಅವರಲ್ಲಿ ಪಕ್ಷಾಂತರ ಆಗುವುದನ್ನು ಮೊದಲು ಬಂದೋಬಸ್ತ್ ಮಾಡಿಕೊಳ್ಳಲಿ ಎನ್ನುವ ಮೂಲಕ ಬಿಜೆಪಿಗೆ ತಿರುಗೇಟು ಕೊಟ್ಟರು.
ಆಪರೇಷನ್ ಹಸ್ತದ ಅವಶ್ಯಕತೆ ನಮಗಿಲ್ಲ: ರಾಜ್ಯದಲ್ಲಿ ಸುಭದ್ರ ಸರಕಾರವಿದೆ. ನಮಗೆ ಯಾವ ಪಕ್ಷದ ಬೆಂಬಲವೂ ಬೇಕಿಲ್ಲ. ಹೀಗಾಗಿ, ನಾವು ಆಪರೇಷನ್ ಹಸ್ತ ವಿಚಾರ ಮಾಡಲ್ಲ, ನಮಗೆ ಅವಶ್ಯಕತೆಯೂ ಇಲ್ಲ. ಅವರು ಸೋತರೆ ಓಡಿಹೋಗುತ್ತಾರೆ. ನಮ್ಮವರು ಯಾರೂ ಬಿಜೆಪಿಗೆ ಹೋಗಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ, ಸಂಪುಟ ಪುನರ್ ರಚನೆ, ಹಿರಿಯ ಸಚಿವರಿಗೆ ಕೋಕ್ ಇವೆಲ್ಲ ಅಮಶಗಳು ಹೈಕಮಾಂಡ್ ನಿರ್ಧಾರ ಎಂದರು.