ಕೊಡಗು: ಎಸ್‌ಎಸ್‌ಎಲ್‌ಸಿ ಬಾಲಕಿಯನ್ನು ಭೀಕರವಾಗಿ ಕೊಲೆ ಮಾಡಿ, ರುಂಡವನ್ನೇ ಕೊಂಡೊಯ್ದಿದ್ದ ಯುವಕನನ್ನು ಸೋಮವಾರ ಕೋಲೀಸರು ಬಂಧಿಸಿದ್ದಾರೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಇತ್ತೀಚೆಗಷ್ಟೇ ಬರೆದು, ಮೊನ್ನೆ ತಾನೇ ಫಲಿತಾಂಶ ಬಂದಿದ್ದ ಯುವತಿ ಜತೆಗೆ ಆರೋಪಿ ಪ್ರಕಾಶ್‌ನ ನಿಶ್ಚಿತಾರ್ಥ ಮಾಡಲಾಗಿತ್ತು. ನಂತರ ಬಾಲ್ಯ ವಿವಾಹ ತಪ್ಪಿಸಿದ ಪೊಲೀಸರು, ಪೋಷಕರ ಮನವೊಲಿಸಿ ಮದುವೆ ನಿಲ್ಲಿಸಿದ್ದರು. ಇದರಿಂದ ಕೋಪಗೊಂಡಿದ್ದ ಯುವಕ ಬಾಲಕಿಯ ಮನೆಗೆ ನುಗ್ಗಿ ಆಕೆಯನ್ನು ಎಳೆದೊಯ್ದು ಬರ್ಬರವಾಗಿ ಕೊಲೆ ಮಾಡಿ, ದೇಹವನ್ನು ಅಲ್ಲೇ ಬಿಸಾಡಿ ರುಂಡವನ್ನು ಜತೆಯಲ್ಲಿಯೇ ಕೊಂಡೊಯ್ದಿದ್ದ. ಇದೀಗ ಪೊಲೀಸರು ಆರೋಪಿ ಪ್ರಕಾಶ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂಬ ಸುಳ್ಳು ವದಂತಿ ಶುಕ್ರವಾರ ವರದಿಯಾಗಿತ್ತು. ಆ ಬಳಿಕ ಈ ಕುರಿತ ಸುದ್ದಿ ಸುಳ್ಳು, ಆರೋಪಿಯ ಪತ್ತೆ ಕಾರ್ಯ ಮುಂದುವರಿಸಿದ್ದೇವೆ ಎಂದು ಎಸ್‌ಪಿ ಪ್ರತಿಕ್ರಿಯೆ ನೀಡಿದ್ದರು. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಜೊತೆಗೆ ಆರೋಪಿ ಬಂಧನದ ಫೋಟೋ ಕೂಡ ಬಿಡುಗಡೆಗೊಳಿಸಿದ್ದಾರೆ. ಆರೋಪಿಯ ಬಂಧನವಾಗಿದೆ. ಆದರೆ ಆತ ತೆಗೆದುಕೊಂಡ ಹೋಗಿದ್ದ ಬಾಲಕಿಯ ರುಂಡ ಇನ್ನೂ ಪತ್ತೆಯಾಗಿಲ್ಲ.
ಮದುವೆ ಮುರಿದುಬಿದ್ದದ್ದಕ್ಕೆ ಕೊಲೆ: ಆರೋಪಿ ಪ್ರಕಾಶ್, ಬಾಲಕಿ ಜತೆಗೆ ನಡೆಯಬೇಕಿದ್ದ ಮದುವೆ ಮುರಿದುಬಿದ್ದದ್ದಕ್ಕೆ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಗುರುವಾರ ಆರೋಪಿ ಪ್ರಕಾಶ್ ಮತ್ತು ಬಾಲಕಿ ನಿಶ್ಚಿತಾರ್ಥ ನಿಶ್ಚಯವಾಗಿತ್ತು. ಬಾಲಕಿ ಅಪ್ರಾಪ್ತೆಯಾದ ಕಾರಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಪೋಷಕರಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಆ ಬಳಿಕ ಎರಡೂ ಮನೆಯ ಪೋಷಕರು, ಬಾಲಕಿಗೆ ೧೮ ವರ್ಷವಾದ ಬಳಿಕ ಪ್ರಕಾಶ್ ಜೊತೆಗೆ ಮದುವೆ ಮಾಡಲು ಒಪ್ಪಿಕೊಂಡಿದ್ದರು. ನಂತರ ಅಧಿಕಾರಿಗಳು ಮತ್ತು ಪ್ರಕಾಶ್ ಮನೆಯವರು ಬಾಲಕಿ ಮನೆಯಿಂದ ತೆರಳಿದ್ದರು.