ಬೆಂಗಳೂರು: ಇಡೀ ದೇಶದ ಗಮನ ಸೆಳೆದಿದ್ದ ಹಿಜಾಬ್ ಪ್ರಕರಣ ಇದೀಗ ಮತ್ತೇ ಸದ್ದು ಮಾಡುತ್ತಿದೆ. ಅದಕ್ಕೆ ಕಾರಣ ಹಿಜಾಬ್ ಧರಿಸಿದ್ದ ಕಾರಣಕ್ಕೆ ಕಾಲೇಜಿನಿಂದ ಹೊರಹಾಕಲ್ಪಟ್ಟ ವಿದ್ಯಾರ್ಥಿನಿ ಮಾಡಿರುವ ಟ್ವೀಟ್
ಉಡುಪಿಯ ಕಾಲೇಜೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದಾರೆ ಎಂಬ ಕಾರಣಕ್ಕೆ ಗಲಾಟೆಯಾಗಿತ್ತು. ಹಿಂದೂ ಯುವಕರು ಕೇಸರಿ ಶಾಲು ಧರಿಸಿ ಬಂದು ಪ್ರತಿಭಟನೆ ನಡೆಸಿ, ನಮಗೂ ಕೇಸರಿ ಶಾಲು ಹಾಕಿಕೊಂಡು ಬರಲು ಅವಕಾಶ ಕೊಡಿ ಎಂದು ಗಲಭೆ ಮಾಡಿದ್ದರು. ಇದು ತೀವ್ರ ವಿವಾದದ ಸ್ವರೂಪ ಪಡೆದುಕೊಂಡಿತ್ತು.
ಈ ವಿಷಯ ಒಂದಷ್ಟು ವಿವಾದವಾಗುತ್ತಿದ್ದಂತೆ, ಘಟನೆ ನಡೆದ ಕಾಲೇಜಿಗೆ ಬಂದ ಶಾಸಕ ರಘುಪತಿ ಭಟ್ ಮತ್ತು ಬೆಂಬಲಿಗರು ಮತ್ತು ಇಡೀ ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಶಾಸಕರು ಹಿಜಾಬ್ ವಿರುದ್ಧ ಪ್ರತಿಭಟನೆ ನಡೆಸಿದರು. ಹಿಜಾಬ್ ಧರಿಸಿ, ಕಾಲೇಜಿಗೆ ಬರುವಂತಿಲ್ಲ ಎಂಬ ಸಮವಸ್ತ್ರ ನಿಯಮದ ಆಧಾರದಲ್ಲಿ ಆಕೆಯನ್ನು ಕಾಲೇಜಿನಿಂದ ಅಮಾನತು ಮಾಡಲಾಗಿತ್ತು.
ಆ ಯುವತಿ, ನ್ಯಾಯಾಲಯದ ಮೆಟ್ಟಿಲೇರಿ, ಪ್ರಕರಣ ಸುಪ್ರೀಂ ಕೋರ್ಟ್ವರೆಗೆ ಹೋಗಿತ್ತು. ಆದರೆ, ಆಗ ಅಧಿಕಾರದಲ್ಲಿದ್ದ ಬಿಜೆಪಿ ಸರಕಾರ ಪ್ರಕರಣವನ್ನು ಮತ್ತಷ್ಟು ಗಂಭೀರವನ್ನಾಗಿಸಿ, ರಾಷ್ಟ್ರೀಯ ಮತ್ತು ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಪ್ರಕರಣ ಚರ್ಚೆಗೆ ಬರುವಂತೆ ಮಾಡಿತ್ತು. ಹೋರಾಟದ ಮೂಲಕವೇ ರಘುಪತಿ ಭಟ್ ಬಿಜೆಪಿಗರ ಪಾಲಿಗೆ ಹಾಟ್ ಪೆವರೇಟ್ ಆಗಿದ್ದರು.
ಆದರೆ, ಮುಂದಿನ ಚುನಾವಣೆಯಲ್ಲಿ ಬಿಜೆಪಿ ರಘುಪತಿ ಭಟ್‌ಗೆ ಟಿಕೆಟ್ ನಿರಾಕರಿಸಿತ್ತು. ಇದೀಗ ವಿಧಾನ ಪರಿಷತ್ ಟಿಕೆಟ್ ಆಕಾಂಕ್ಷಿಯಾಗಿದ್ದ ರಘುಪತಿ ಭಟ್‌ಗೆ ಬಿಜೆಪಿ ಟಿಕೆಟ್ ನಿರಾಕರಿಸಿದೆ. ಪಕ್ಷೇತರ ಅಭ್ಯರ್ಥಿಯಾಗಿ ಅವರು ಸ್ಪರ್ಧೆ ಮಾಡಿದ್ದು, ಬಿಜೆಪಿ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದೆ.
ಯುವತಿಯ ಟ್ವೀಟ್ ವೈರಲ್: ರಘುಪತಿ ಭಟ್ ಉಚ್ಛಾಟನೆಯಾಗುತ್ತಿದ್ದಂತೆ ಹಿಜಾಬ್ ಪ್ರಕರಣದಲ್ಲಿ ಅಮಾನತಾಗಿದ್ದ ಯುವತಿ ಆಲಿಯಾ ಅಸದಿ ಮಾಡಿರುವ ಟ್ವೀಟ್ ವೈರಲ್ ಆಗಿದೆ. ಪರೀಕ್ಷೆಗೆ 60 ದಿನ ಇರುವಾಗ ಹಿಜಾಬ್ ಧರಿಸಿದ್ದೇನೆ ಎಂಬ ಕಾರಣಕ್ಕೆ ನನ್ನನ್ನು ಕಾಲೇಜಿನಿಂದ ಉಚ್ಛಾಟನೆ ಮಾಡಿದ್ದರು. ಇದನ್ನು ನಿಮ್ಮ ಪಕ್ಷ ನಿಮ್ಮ ಸಾಧನೆ ಎಂದು ಕೊಂಡಾಡಿತ್ತು. ಈಗ ನಿಮ್ಮನ್ನೇ ಪಕ್ಷದಿಂದ ಉಚ್ಛಾಟನೆ ಮಾಡಿದೆ.
ಅಂದು ನಾನು ಉಚ್ಛಾಟಿತೆ: ಇಂದು ನೀವು: ಯುವತಿ ಆಲಿಯಾ ಅಸದಿ, ತಮ್ಮ “ಎಕ್ಸ್” ಖಾತೆಯಲ್ಲಿ ರಘಪತಿ ಭಟ್ ಅವರೆ, ಅಂದು ನಾನು ಉಚ್ಛಾಟಿತೆ, ನಿಮಗೆ ಪಕ್ಷದಲ್ಲಿ ಪದವಿ, ಇಂದು ನಾನು ಕಾನೂನು ಪದವಿ ವಿದ್ಯಾರ್ಥಿ, ನೀವು ನಿಮ್ಮ ಪಕ್ಷದಲ್ಲಿ ಉಚ್ಛಾಟಿತ ವ್ಯಕ್ತಿ ಎಂಟು ಟ್ವೀಟ್ ಮಾಡಿದ್ದಾರೆ. ಇದು ಸಾವಿರಾರು ಜನ ಲೈಕ್ ಮಾಡಿ, ಶೇರ್ ಮಾಡಿದ್ದು ನ್ಯಾಯವಾಗಿರುವವರಿಗೆ ದೇವರು ಒಳ್ಳೆಯದನ್ನೇ ಮಾಡುತ್ತಾನೆ ಎಂದು ಹೊಗಳಿದ್ದಾರೆ. ಇನ್ನು ಕೆಲವರು ಆಲಿಯಾ ನಡೆಯನ್ನು ಟೀಕಿಸಿದ್ದಾರೆ.
