ಬೆಂಗಳೂರು: ಮೂಡಾ ಸೈಟು ಹಂಚಿಕೆ ವಿಚಾರದಲ್ಲಿ ಬಿಜೆಪಿ ನಡೆಸುತ್ತಿರುವ ಹೋರಾಟಕ್ಕೆ ಕಿಡಿಕಾರಿರುವ ಸಚಿವ ಸಂತೋಷ್ ಲಾಡ್, ಬಿಜೆಪಿ ನಾಯಕರಿಗೆ ಮಾಡೋಕೆ ಬೇರೇನು ಕೆಲಸವಿಲ್ಲ. ಹೀಗಾಗಿ ಇಂತಹದ್ದೆಲ್ಲ ಮಾಡ್ತಾರೆ ಎಂದು ಗುಡುಗಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಬಿಜೆಪಿಯವರಿಗೆ ಮಾಡೋಕೆ ಕೆಲಸವಿಲ್ಲ. ಸೈಟು ಹಂಚಿಕೆಯಾಗಿದ್ದು ಯಾರ ಕಾಲದಲ್ಲಿ ಎಂಬುದನ್ನು ಅವರು ಮೊದಲು ತಿಳಿದು ಅನಂತರ ಮಾತನಾಡಲಿ, ಪ್ರಚಾರಕ್ಕಾಗಿ ಪ್ರತಿಭಟನೆ ಮಾಡುವುದಲ್ಲ. ಸೈಟು ಹಂಚಿಕೆಯಾಗಿರುವುದು ಯಾರ ಅಧಿಕಾರವಧಿಯಲ್ಲಿ ಎಂಬುದನ್ನು ತಿಳಿಯಲಿ ಎಂದಿದ್ದಾರೆ.
ಕಾನೂನು ಬಾಹಿರವಾಗಿ ಸೈಟು ಹಂಚಿಕೆಯಾಗಿದ್ರೆ ಹೋರಾಟ ಮಾಡಲಿ, ಅದನ್ನು ಬಿಟ್ಟು, ಮಾತುಮಾತಿಗೆಲ್ಲ ಹೋರಾಟ ಮಾಡ್ತೀವಿ ಅಂತ ಹೊರಡುವುದು ಮೂರ್ಖತನ. ಅದೇ ನೀಟ್ ಪರೀಕ್ಷೆಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಈ ವಿಚಾರದಲ್ಲಿ ಯಾಕೆ ಬಿಜೆಪಿ ಪ್ರತಿಭಟನೆ ಮಾಡಲ್ಲ ಎಂದು ಪ್ರಶ್ನೆ ಮಾಡಿದರು.
ಮೈಸೂರು ನಗರದ ಕಸರೆ ಬಳಿ ಮೂಡಾ ವತಿಯಿಂದ ಜಮೀನು ವಶಪಡಿಸಿಕೊಂಡು ಅಭೀವೃದ್ಧಿ ಪಡಿಸಲಾಗಿತ್ತು. ಇದೀಗ ಈ ಲೇಔಟ್ ವಿಚಾರದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಇಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಹೆಸರಿನಲ್ಲಿಯೂ ಜಮೀನು ಇರುವುದು ಮತ್ತಷ್ಟು ಸಮಸ್ಯೆಗೆ ಕಾರಣವಾಗಿದೆ.
ಮೂಡಾದಲ್ಲಿ ಕೋಟ್ಯಂತರ ರುಪಾಯಿ ಹಗರಣ ನಡೆದಿದೆ ಎಂದು ಆರೋಪಿಸಿ, ಬಿಜೆಪಿ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಮೈಸೂರಿನ ಮೂಡಾ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಸಿಎಂ ಮನೆಗೆ ಮುತ್ತಿಗೆ ಹಾಕುವ ಪ್ರಯತ್ನವನ್ನು ಬಿಜೆಪಿ ನಾಯಕರು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಂತೋಷ್ ಲಾಡ್ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.