ಅಂಕಣ ರಾಜಕೀಯ ಸುದ್ದಿ

ಒಂದೇ ಕಲ್ಲಲ್ಲಿ ಮೂರು-ನಾಲ್ಕು ಹಕ್ಕಿ : ಇದಲ್ವಾ ಮೋದಿ, ಅಮಿತ್ ಶಾ ಮಾಸ್ಟರ್ ಸ್ಟ್ರೋಕ್ !

Share It


ಬೆಂಗಳೂರು: ಪ್ರಜ್ವಲ್ ಪೆನ್‌ ಡ್ರೈವ್ ಪ್ರಕರಣ ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದ್ದು, ದಿನದಿಂದ ದಿನಕ್ಕೆ ರಾಜಕೀಯ ತಿರುವು ಪಡೆದುಕೊಂಡು ಮತ್ತಷ್ಟು ಗಂಭೀರತೆಯೆಡೆಗೆ ಸಾಗುತ್ತಿದೆ.

ಈ ನಡುವೆ ಪ್ರರಕಣದ ಗಂಭೀರತೆಯ ಹಾದಿ ತಪ್ಪಿಸುವ ಕೆಲಸವನ್ನು ಕೆಲ ನಾಯಕರು ಮಾಡುತ್ತಿದ್ದು, ರೇವಣ್ಣ ಜೈಲು ಸೇರಿದ್ದರೆ, ಪ್ರಜ್ವಲ್ ದೇಶಾಂತರ ಹೋಗಿದ್ದಾಗಿದೆ. ಇತ್ತೀಚೆಗಷ್ಟೇ ಬಿಜೆಪಿ ಜತೆ ಸಖ್ಯ ಬೆಳೆಸಿದ್ದ ಜೆಡಿಎಸ್ ಮಿತ್ರ ಪಕ್ಷದ ಮುಂದೆ ಸಂಪೂರ್ಣ ಶರಣಾಗಿದೆ.

ಬಿಜೆಪಿ ಜತೆಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು ಯಾವ ಕಾರಣಕ್ಕೆ, ಬಿಜೆಪಿ ಇದನ್ನು ಒಪ್ಪಿದ್ದು ಯಾವ ಕಾರಣಕ್ಕೆ ಎಂಬುದನ್ನೆಲ್ಲ ವಿಶ್ಲೇಷಿಸಿ ನೋಡಿದಾಗ, ಜೆಡಿಎಸ್ ಮರ್ಯಾದೆ ಉಳಿಸಿಕೊಳ್ಳಲು ಮಾಡಿದ ಪ್ರಯತ್ನ, ಬಿಜೆಪಿಗೆ ಬಹುದೊಡ್ಡ ಲಾಭವಾಗುವಂತೆ ಗೋಚರಿಸುತ್ತಿದೆ. ಒಟ್ಟಾರೆ, ಬಿಜೆಪಿ ಮೈತ್ರಿ ಹೆಸರಲ್ಲಿ ಭರ್ಜರಿ ಲಾಭವನ್ನೇ ಗಳಿಸಿಕೊಂಡಿದೆ.

ಸಾಮಾನ್ಯವಾಗಿ ಬಿಜೆಪಿ ಮೈತ್ರಿ ಮಾಡಿಕೊಂಡ ಕಡೆಗಳಲ್ಲೆಲ್ಲ ಪ್ರಾದೇಶಿಕ ಪಕ್ಷಗಳು ಸಂಪೂರ್ಣವಾಗಿ ನೆಲಕಚ್ಚಿವೆ. ಜೆಡಿಎಸ್ ಕೂಡ ಅದೇ ಹಾದಿಯಲ್ಲಿ ಸಾಗುತ್ತಿದೆ. ಹಳೇ ಮೈಸೂರು ಭಾಗದಲ್ಲಿದ್ದ ಒಕ್ಕಲಿಗ ಸಮುದಾಯದ ಒಕ್ಕೊರಲ ಮತಪೆಟ್ಟಿಗೆಯನ್ನು ಜೆಡಿಎಸ್‌ನಿಂದ ತನ್ನ ಕಡೆಗೆ ಸೆಳೆದುಕೊಳ್ಳುವಲ್ಲಿ ಬಿಜೆಪಿ ಸಾಗುತ್ತಿದೆ. ಪ್ರಜ್ವಲ್ ಪ್ರಕರಣದಿಂದ ದೇವೇಗೌಡರ ಕುಟುಂಬದ ರಾಜಕೀಯ ಪ್ರಖರತೆ ಕಡಿಮೆಯಾಗುವುದು ಶತಸಿದ್ಧ.

ರೇವಣ್ಣಗೆ ತಕ್ಕ ಪಾಠ: ಮೈತ್ರಿ ಸರಕಾರ ಪತನದ ನಂತರ ಕುಮಾರಸ್ವಾಮಿ ಕಾಂಗ್ರೆಸ್ ಜತೆಗೆ ಮುನಿಸಿಕೊಂಡಿದ್ದರು. ಹೀಗಾಗಿ, ಮುಂದೆ ಮೈತ್ರಿಯಾದರೂ ಬಿಜೆಪಿ ಬಿಟ್ಟು ಭೇರೆ ದಾರಿ ಇರಲಿಲ್ಲ. ಆದರೆ, ರೇವಣ್ಣ ಕಾಂಗ್ರೆಸ್‌ಗೆ ಹೋಗಲು ತುದಿಗಾಲಲ್ಲಿ ನಿಂತಿದ್ದರು. ಅದಕ್ಕೆ ಅಗತ್ಯ ವೇದಿಕೆಯನ್ನೆಲ್ಲ ಸಿದ್ಧವಾಗಿಟ್ಟುಕೊಂಡಿದ್ದರು. ಪ್ರಜ್ವಲ್ ಪ್ರಕರಣದಿಂದ ಅವರನ್ನು ಬಿಜೆಪಿ ಜತೆ ಬರುವಂತೆ ಮಾಡಿ, ಮೈತ್ರಿ ನೆಪದಲ್ಲಿ ಅನಿವಾರ್ಯವಾಗಿ ಅವರು, ಬಿಜೆಪಿ ಜತೆಗೆ ಸಖ್ಯ ಬೆಳೆಸುವಂತೆ ಮಾಡಲಾಯಿತು. ಈಗ ಹಾಸನದಲ್ಲಿ ರೇವಣ್ಣ ಮತ್ತೇ ರಾಜಕೀಯವಾಗಿ ಮೇಲೇಳದಂತಹ ಹೊಡೆತ ನೀಡಿದ್ದಾಯಿತು.

ಕುಮಾರಸ್ವಾಮಿ ಬಾಯಿಯೂ ಬಂದ್ : ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಕಾಂಗ್ರೆಸ್‌ ಗಿಂತಲೂ ಕಟುವಾಗಿ ಟೀಕಿಸಿದ್ದು ಕುಮಾರಸ್ವಾಮಿ. ಪೇಶ್ವೆ ಸಂತತಿ ಎಂಬಲ್ಲಿಂದ ಹಿಡಿದು, ದ್ರಾವಿಡ, ಶೂದ್ರ ಸಿದ್ಧಾಂತ, ಆರ್‌ಎಸ್‌ಎಸ್ ಗರ್ಭಗುಡಿ ಸಂಸ್ಕೃತಿ ಬಗ್ಗೆ ಕುಮಾರಸ್ವಾಮಿ ಕಟುವಾಗಿ ಟೀಕಿಸಿದ್ದರು. ಲೋಕಸಭೆ ಮೈತ್ರಿಯ ನೆಪದಲ್ಲಿ ಕುಮಾರಸ್ವಾಮಿ, ನರೇಂದ್ರ ಮೋದಿ, ಬಿಜೆಪಿಯನ್ನು ಹಾಡಿ ಹೊಗಳುವಂತೆ ಮಾಡಲಾಗಿದೆ. ಆ ಮೂಲಕ ಸೈದ್ಧಾಂತಿಕವಾಗಿ ತಮ್ಮನ್ನು ವಿರೋಧಿಸುತ್ತಿದ್ದ ನಾಯಕನ್ನೊಬ್ಬನನ್ನು ತನ್ನೊಳಗೆ ಸೇರಿಸಿಕೊಳ್ಳುವ ಪ್ರಕ್ರಿಯೆ ಮೂಲಕ ಬಿಜೆಪಿ ಜಯಗಳಿಸಿದೆ.

ಡಿಕೆಶಿಗೆ ತಕ್ಕ ಒಕ್ಕಲಿಗ ನಾಯಕ ಸಿಕ್ಕಂತಾಯ್ತು : ಇನ್ನು ಡಿಕೆಶಿ ಎದುರಿಸುವ ಒಬ್ಬ ಒಕ್ಕಲಿಗ ನಾಯಕನನ್ನು ಬಿಜೆಪಿ ಎರವಲು ಪಡೆದುಕೊಂಡಿತು. ತನ್ನಲ್ಲಿಯೇ ಒಬ್ಬ ಪ್ರಬಲ ಒಕ್ಕಲಿಗ ನಾಯಕನನ್ನು ಹುಟ್ಟುಹಾಕುವ ಪ್ರಯತ್ನ ನಡೆಸಿದ್ದ ಬಿಜೆಪಿ ಅದರಲ್ಲಿ ಸಂಪೂರ್ಣವಾಗಿ ಸೋತಿತ್ತು. ಮೊದಲಿಗೆ ಆರ್.ಅಶೋಕ್, ಇಡೀ ರಾಜ್ಯವನ್ನು ಪ್ರತಿನಿಧಿಸುವ ಒಕ್ಕಲಿಗ ನಾಯಕನಾಗದೇ, ಬೆಂಗಳೂರಿಗೆ ಸೀಮಿತವಾದರು. ಅಶ್ವತ್ಥ ನಾರಾಯಣರನ್ನು ರಾಮನಗರಕ್ಕೆ ಬಿಟ್ಟು, ಪ್ರಯೋಗ ಮಾಡಿದ್ದಾಯಿತು. ಯೋಗೇಶ್ವರ್ ಔಟ್ಡೇಟೆಡ್ ಆದರು. ವಿಧಿಯಿಲ್ಲದೆ ಈಗಾಗಲೇ, ವಿರೋಧಿಯಾಗಿರುವ ಎಚ್‌ಡಿಕೆಯನ್ನೇ ಡಿಕೆಶಿ ಎದುರಾಳಿಯನ್ನಾಗಿಸುವುದು ಬಿಜೆಪಿ ಪ್ರಯೋಗವಾಗಿದೆ.

ಹಳೇ ಮೈಸೂರು ಸುಲಭ ತುತ್ತಾಯ್ತು : ಹಳೇ ಮೈಸೂರು ಭಾಗ ಬಿಜೆಪಿಗೆ ಯಾವಾಗಲೂ ಅಷ್ಟೇನೂ ಸುಲಭ ತುತ್ತಾಗಿರುತ್ತಿರಲಿಲ್ಲ. ಬೆಂಗಳೂರು ಹೊರತುಪಡಿಸಿ, ಉಳಿದ ಜಾಗದಲ್ಲಿ ಒಕ್ಕಲಿಗರ ಪ್ರಾಬಲ್ಯವಿರುವ ಕಡೆ, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆಯೇ ನೇರ ಹಣಾಹಣಿ ನಡೆಯುತ್ತಿತ್ತು. ಈಗ ಬಿಜೆಪಿ ಜತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವ ಕಾರಣಕ್ಕೆ ಒಕ್ಕಲಿಗ ಸಮುದಾಯದಲ್ಲಿ ಅರ್ಧಕ್ಕರ್ಧ ಬಿಜೆಪಿಗೆ ಜೈ ಎನ್ನುತ್ತಿದೆ.

ಒಂದು ವೇಳೆ ಜೆಡಿಎಸ್ ಬಿಜೆಪಿ ಮೈತ್ರಿಯಿಂದ ಹೊರನಡೆದರೂ, ಒಟ್ಟಾರೆ ಒಕ್ಕಲಿಗ ಸಮುದಾಯ ಮರಳಿ ಜೆಡಿಎಸ್ ಜತೆ ಹೋಗುವುದಿಲ್ಲ. ಬಿಜೆಪಿ ಜತೆಯಲ್ಲಿಯೇ ಉಳಿಯುವ ಮನಸ್ಸು ಮಾಡುತ್ತದೆ. ಇದು ಬಿಜೆಪಿಗೆ ಅತಿದೊಡ್ಡ ಲಾಭ. ಹೀಗೆ, ನಾಲ್ಕಾರು ಲೆಕ್ಕಾಚಾರದಲ್ಲಿ ಬಿಜೆಪಿ ಹೆಜ್ಜೆಯನ್ನಿಟ್ಟರೆ, ತಮ್ಮ ತಪ್ಪುಗಳಿಂದಾಗಿ ಬೆಪ್ಪಾಗಿ ಅವರ ಮುಂದೆ ನಿಂತು ತಮ್ಮ ಪಕ್ಷ ಹಾಗೂ ದಶಕಗಳ ಕಾಲ ತಮ್ಮ ಕುಟುಂಬಕ್ಕಿದ್ದ ರಾಜಕೀಯ ಹಿಡಿತವನ್ನು ದೇವೇಗೌಡರ ಕುಟುಂಬ ಬಿಟ್ಟುಕೊಟ್ಟಿದೆ ಎನ್ನಬಹುದು.

ಬಿಜೆಪಿ ಮಾಡಿದ್ದೇನು?

  • ಜೆಡಿಎಸ್ ಹೋಳು ಮಾಡಿ ಕಾಂಗ್ರೆಸ್ ಕಡೆ ಹೊರಡಲು ಸಜ್ಜಾಗಿದ್ದ ರೇವಣ್ಣನ ಬಾಯಿ ಬಂದ್
  • ಆರ್‌ಎಸ್‌ಎಸ್ ಸಿದ್ಧಾಂತ, ಪೇಶ್ವೆ ಸಂತತಿ ಬಗ್ಗೆ ಮಾತನಾಡುತ್ತಿದ್ದ ಕುಮಾರಣ್ಣನು ಸೈಲೆಂಟ್
  • ಡಿಕೆ ಶಿವಕುಮಾರ್ ಹೆದರಿಸುವ ಸೂಕ್ತ ಒಕ್ಕಲಿಗ ನಾಯಕರು ಸಿಕ್ಕಂತಾಯ್ತು
  • ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಬಲ ಹೆಚ್ಚಳ,
  • ಪ್ರಾದೇಶಿಕ ಪಕ್ಷವೊಂದರ ಸರ್ವನಾಶ

Share It

You cannot copy content of this page