ರಾಮನಗರ (ಬೆಂಗಳೂರು ದಕ್ಷಿಣ): ಅಡುಗೆ ಸಿಲಿಂಡರ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡು ಸಂಭವಿಸಿದ ದುರಂತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಒಂದೇ ಕುಟುಂಬದ ಮೂವರು ಚಿಕಿತ್ಸೆ ಫಲಿಸದೇ ಮೃತಪಟ್ಟ ಘಟನೆ ನಡೆದಿದೆ.
ಕನಕಪುರದ ಅಮರನಾರಾಯಣ ಬ್ಲಾಕ್ನ ಸಿದ್ದರಾಜು (50), ಪತ್ನಿ ಸವಿತಾ (45) ಹಾಗೂ ಪುತ್ರ ಪ್ರಶಾಂತ್ (24) ಮೃತ ದುರ್ದೈವಿಗಳು. ಗ್ಯಾರೇಜ್ ಮುಂಭಾಗದಲ್ಲಿ ತಳ್ಳುಗಾಡಿ ಇಟ್ಟುಕೊಂಡು ಬಜ್ಜಿ-ಬೊಂಡಾ ಮಾರುವ ಹೋಟೆಲ್ ನಡೆಸುತ್ತಿದ್ದ ಕುಟುಂಬ, ಕಳೆದ ಸೋಮವಾರ ಮನೆಯಲ್ಲೇ ಖಾರ ಮಿಕ್ಸರ್ ತಯಾರಿಸುತ್ತಿದ್ದಾಗ ಸಿಲಿಂಡರ್ ಪೈಪ್‌ನಿಂದ ಗ್ಯಾಸ್ ಸೋರಿಕೆಯಾಗಿತ್ತು. ಈ ವೇಳೆ, ಒಮ್ಮೆಲೆ ಬೆಂಕಿ ಹೊತ್ತಿಕೊಂಡು ಇಡೀ ಕೋಣೆ ಆವರಿಸಿತ್ತು.
ಬೆಂಕಿ ಹೆಚ್ಚಾಗುತ್ತಿರುವುದನ್ನು ಕಂಡು ನಂದಿಸಲು ಪ್ರಯತ್ನಿಸಿದ್ದರು. ಆದರೆ, ಮೂವರಿಗೆ ಬೆಂಕಿ ತಗಲಿ ಗಂಭೀರ ಸುಟ್ಟ ಗಾಯಗಳಾಗಿದ್ದವು. ಮನೆಯ ಅಕ್ಕ-ಪಕ್ಕದವರು ಬೆಂಕಿಯನ್ನು ಕಂಡು ಕೂಡಲೇ ಅಗ್ನಿಶಾಮಕ ದಳದವರಿಗೆ ಮಾಹಿತಿ ತಿಳಿಸಿದ್ದರು. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದ್ದರು. ಆದರೆ, ಅಷ್ಟರಲ್ಲಿ ಮೂವರಿಗೆ ಗಂಭೀರವಾಗಿ ಗಾಯವಾಗಿತ್ತು. ಅವರನ್ನು ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೂವರೂ ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ.
ತಳ್ಳುವ ಗಾಡಿಯಲ್ಲಿ ತಿಂಡಿ ತಿನಿಸು ಮಾರಾಟ ಮಾಡುತ್ತಿದ್ದ ಕುಟುಂಬ ಸದಸ್ಯರು ಮನೆಯ ಹೊರಗೆ ಜ. 26ರಂದು ತಿಂಡಿ ತಯಾರಿಸುತ್ತಿದ್ದರು. ಈ ವೇಳೆ ಗ್ಯಾಸ್ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡಿತ್ತು. ಆರಿಸಲು ಹೋಗಿ ಗಾಯಗೊಂಡಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಪ್ರಶಾಂತ್ 27ರಂದು ಮೃತಪಟ್ಟರೆ, ಜ.29ರಂದು ತಂದೆ ಸಿದ್ದರಾಜು, ಜ.30ರಂದು ತಾಯಿ ಚಂದ್ರಮ್ಮ ಮೃತಪಟ್ಟಿದ್ದಾರೆ. ಘಟನೆ ಕನಕಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

