ರೈಲಿನಲ್ಲಿ 1 ಸಾವಿರ ಆಮೆಗಳ ಸಾಗಾಟ: ಇಬ್ಬರು ಮಹಿಳೆಯರು ಸೇರಿ ಮೂವರ ಬಂಧನ
ಜಾರ್ಖಂಡ್: ವಿವಿಧ ಪ್ರಭೇದದ 1000 ಕ್ಕೂ ಹೆಚ್ಚು ಜೀವಂತ ಆಮೆಗಳನ್ನು ರೈಲಿನ ಮೂಲಕ ಕಳ್ಳ ಸಾಗಣೆ ಮಾಡುತ್ತಿದ್ದ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಆರೋಪಿಗಳನ್ನು ರೈಲ್ವೆ ರಕ್ಷಣಾ ಪಡೆ ಬಂಧಿಸಿದೆ.
ನಿಷೇಧಿತ ವನ್ಯಜೀವಿ ಪ್ರಭೇದಗಳ ಕಳ್ಳಸಾಗಣೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಇವರ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಈ ಕುರಿತು ತನಿಖೆ ಸಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೂಲಗಳ ಪ್ರಕಾರ, ಆರ್‌ಪಿಎಫ್ ಬರ್ಹವಾ ನಿಲ್ದಾಣದಲ್ಲಿ ನಿಯಮಿತ ತಪಾಸಣೆ ನಡೆಸುತ್ತಿದ್ದಾಗ ಫರಕ್ಕಾ ಎಕ್ಸ್ಪ್ರೆಸ್ ರೈಲಿನಲ್ಲಿ ವಿವಿಧ ಗಾತ್ರದ ಸಾವಿರಕ್ಕೂ ಹೆಚ್ಚು ಸಂರಕ್ಷಿತ ಆಮೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆಮೆಗಳನ್ನು 22 ಚೀಲಗಳಲ್ಲಿ ಕಳ್ಳಸಾಗಣೆ ಮಾಡಲಾಗುತ್ತಿತ್ತು. ಆರ್‌ಪಿಎಫ್ ಕಾರ್ಯಾಚರಣೆ ಸಮಯದಲ್ಲಿ ಕೆಲ ಕಳ್ಳಸಾಗಣೆದಾರರು ತಪ್ಪಿಸಿಕೊಂಡಿದ್ದಾರೆ. ಬಂಧಿತರನ್ನು ಕರಣ್ ಪಾಠ್ಕರ್ (25), ಮಂಜು ಪಾಠ್ಕರ್ (30) ಮತ್ತು ಉಷಾ ಪಾಠ್ಕರ್ ಎಂದು ಗುರುತಿಸಲಾಗಿದೆ. ಈ ಆರೋಪಿಗಳು ಉತ್ತರ ಪ್ರದೇಶದ ಸುಲ್ತಾನ್‌ಪುರ ಜಿಲ್ಲೆ ನಿವಾಸಿಗಳಾಗಿದ್ದಾರೆ.
ಈ ಆಮೆಗಳನ್ನು ವಾರಣಾಸಿ ನಿಲ್ದಾಣದಿಂದ ಫರಕ್ಕಾಗೆ ಕೊಂಡೊಯ್ಯಲಾಗುತ್ತಿತ್ತು ಎಂದು ವಿಚಾರಣೆ ವೇಳೆ ಆರೋಪಿಗಳು ತಿಳಿಸಿರುವ ಮಾಹಿತಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


