ಬೆಂಗಳೂರು: ಸಿಎಂ, ಡಿಸಿಎಂ, ಕೆಪಿಸಿಸಿ ಅಧ್ಯಕ್ಷರ ಕಿತ್ತಾಟಕ್ಕೆ ರೋಚಕ ತಿರುವು ಸಿಕ್ಕಿದ್ದು, ನಾಳೆ ಬೆಳಗ್ಗೆ 11 ಗಂಟೆಗೆ ಕೆಪಿಸಿಸಿ ಪದಾಧಿಕಾರಿಗಳ ಸಭೆ ಕರೆಯಲಾಗಿದೆ.
ಸಭೆಯ ಉದ್ದೇಶವೇನು? ದಿಢೀರ್ ಸಭೆ ಕರೆಯಲು ಕಾರಣವೇನು? ಎಂಬೆಲ್ಲ ವಿಚಾರಗಳು ಇದೀಗ ರೋಚಕ ಚರ್ಚೆಗೆ ಗ್ರಾಸವಾಗಿವೆ. ದೆಹಲಿಯಿಂದ ಬರುತ್ತಿದ್ದಂತೆ ಸಭೆ ಕರೆದಿರುವ ಡಿ.ಕೆ. ಶಿವಕುಮಾರ್ ಯಾವ ಸಂದೇಶ ರವಾನೆಗೆ ಸಜ್ಜಾಗಿದ್ದಾರೆ ಎಂಬುದೀಗ ಕುತೂಹಲ ಮೂಡಿಸಿದೆ.
ಡಿಸಿಎಂ ಸ್ಥಾನದ ಕುರಿತು ಸಿದ್ದರಾಮಯ್ಯ ಬಣದ ಸಚಿವರು ನೀಡುತ್ತಿರುವ ವಿವಾದಾತ್ಮಕ ಹೇಳಿಕೆಗಳ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಡಿ.ಕೆ. ಶಿವಕುಮಾರ್ ದೂರು ನೀಡಿದ್ದರು. ಅವರ ಭೇಟಿಯ ಬೆನ್ನಲ್ಲೇ ಪದಾಧಿಕಾರಿಗಳ ಸಭೆ ಕರೆದಿರುವ ಡಿಕೆಶಿ, ಹೇಳಿಕೆ ನೀಡುತ್ತಿದ್ದ ನಾಯಕರಿಗೆ ಟಾಂಗ್ ನೀಡಿದ್ದಾರೆ.
ಬೆಳಗ್ಗೆ 11 ಗಂಟೆಗೆ ನಡೆಯುವ ಸಭೆಯಲ್ಲಿ ಭಾಗವಹಿಸುಂತೆ 190 ಪದಾಧಿಕಾರಿಗಳಿಗೂ ಆಹ್ವಾನ ನೀಡಲಾಗಿದೆ. ಸಭೆಯಲ್ಲಿ ಡಿ.ಕೆ.ಶಿವಕುಮಾರ್ ಅಧ್ಯಕ್ಷರಾಗಿ ಈವರೆಗೆ ಮಾಡಿದ ಸಾಧನೆಗಳ ಕುರಿತ ಕಿರುಚಿತ್ರವೊಂದರ ಪ್ರದರ್ಶನ ಮಾಡಲಾಗುತ್ತದೆ. ಆ ಮೂಲಕ ಅವರ ಅವಧಿಯಲ್ಲಿ ಪಕ್ಷ ಸಂಘಟನೆ ಮಾಡಿದ ರೀತಿಯನ್ನು ಮನವರಿಕೆ ಮಾಡಿಕೊಡಲು ತೀರ್ಮಾನಿಸಲಾಗಿದೆ.
ಆ ಮೂಲಕ ಕಾಂಗ್ರೆಸ್ ಆಂತರಿಕ ಭಿನ್ನಮತ ಮತ್ತೊಂದು ಹಂತಕ್ಕೆ ಬಂದು ನಿಂತಿದೆ. ಸಭೆಗೆ ಸಿಎಂ ಸಿದ್ದರಾಮಯ್ಯ ಅವರಿಗೂ ಆಹ್ವಾನ ನೀಡಿದ್ದು, ಸಿಎಂ ಕಾರ್ಯಕ್ರಮದ ಪಟ್ಟಿಯಲ್ಲಿ ಸಭೆಯ ಮಾಹಿತಿ ಇಲ್ಲ. ಹೀಗಾಗಿ, ಅವರ ಭಾಗವಹಿಸುತ್ತಾರಾ ? ಇಲ್ಲವಾ ಎಂಬುದು ಕುತೂಹಲ ಮೂಡಿಸಿದೆ.