ಉಪಯುಕ್ತ ಸುದ್ದಿ

ರಾಜ್ಯದಲ್ಲಿ ಏಪ್ರಿಲ್ ನಿಂದ ಏರಿಕೆಯಾಗಲಿದೆ ಟೋಲ್ ಸುಂಕ!

Share It

ಬೆಂಗಳೂರು: ಏಪ್ರಿಲ್ 1 ರಿಂದ ಕರ್ನಾಟಕದಲ್ಲಿ ಟೋಲ್ ಸುಂಕ ಶೇ 3ರಿಂದ ಶೇ.5 ರಷ್ಟು ಹೆಚ್ಚಾಗಲಿವೆ. ಈ ನಿಟ್ಟಿನಲ್ಲಿ ಮುಂದಿನ ಕೆಲವೇ ದಿನಗಳಲ್ಲಿ ಅಧಿಸೂಚನೆ ಹೊರಡಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಗಳು ತಿಳಿಸಿವೆ.

ಇದರೊಂದಿಗೆ ಕರ್ನಾಟಕದ ವಾಹನ ಸವಾರರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಶಾಕ್ ನೀಡಿದಂತಾಗಲಿದೆ. ಬೆಲೆ ಏರಿಕೆ, ಹಣದುಬ್ಬರಕ್ಕೆ ಅನುಗುಣವಾಗಿ ವಾರ್ಷಿಕವಾಗಿ ಮಾಡುವ ದರ ಪರಿಷ್ಕರಣೆ ಪ್ರಕ್ರಿಯೆಯ ಭಾಗವಾಗಿ ಈಗ ಟೋಲ್ ಸುಂಕ ಹೆಚ್ಚಳಕ್ಕೆ ಎನ್​ಎಚ್​​ಎಐ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದ 66 ಟೋಲ್ ಪ್ಲಾಜಾಗಳಲ್ಲಿ ಹೆಚ್ಚಿನ ಟೋಲ್​ಗಳಿಗೆ ಪರಿಷ್ಕೃತ ದರಗಳು ಅನ್ವಯವಾಗಲಿವೆ. ಗರಿಷ್ಠ ಶೇ. 5 ರಷ್ಟು ಮತ್ತು ಕನಿಷ್ಠ ಶೇ. 3 ರಷ್ಟು ಹೆಚ್ಚಳವಾಗಲಿದೆ ಎಂದು ಎನ್‌ಎಚ್‌ಎಐ ಯ ಬೆಂಗಳೂರಿನ ಯೋಜನಾ ನಿರ್ದೇಶಕ ಕೆ.ಬಿ ಜಯಕುಮಾರ್ ಮಾಹಿತಿ ನೀಡಿದ್ದಾರೆ.

ಟೋಲ್ ಸುಂಕ ಹೆಚ್ಚವಾಗಲಿರುವ ಮುಖ್ಯ ಟೋಲ್ ಪ್ಲಾಜಾಗಳಿವು: ಕರ್ನಾಟಕದಲ್ಲಿ ಸುಮಾರು 66 ಟೋಲ್ ಪ್ಲಾಜಾಗಳಿವೆ. ಟೋಲ್ ಸುಂಕ ಹೆಚ್ಚಾಗುವ ಟೋಲ್ ಪ್ಲಾಜಾಗಳಲ್ಲಿ ಕಣಿಮಿಣಿಕೆ ಮತ್ತು ಶೇಷಗಿರಿಹಳ್ಳಿ (ಬೆಂಗಳೂರು-ಮೈಸೂರು), ನಂಗ್ಲಿ (ಬೆಂಗಳೂರು-ತಿರುಪತಿ), ಬಾಗೇಪಲ್ಲಿ (ಬೆಂಗಳೂರು-ಹೈದರಾಬಾದ್), ಸಾದಹಳ್ಳಿ (ಬೆಂಗಳೂರು ವಿಮಾನ ನಿಲ್ದಾಣ ರಸ್ತೆ) ಮತ್ತು ಹುಲಿಕುಂಟೆ ಮತ್ತು ನಲ್ಲೂರು- ದೇವನಹಳ್ಳಿ (ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ) ಟೋಲ್ ಪ್ಲಾಜಾಗಳು ಸೇರಿವೆ.

ಟೋಲ್​ ನೀತಿಗಳಲ್ಲಿ ಬದಲಾವಣೆ!: ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ರಸ್ತೆ ಬಳಕೆದಾರರಿಗೆ ಕೆಲವು ರಿಯಾಯಿತಿಗಳನ್ನು ನೀಡುವ ಉದ್ದೇಶದೊಂದಿಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಶುಲ್ಕಗಳಿಗೆ ಹೊಸ ನೀತಿಯನ್ನು ಪರಿಚಯಿಸಲು ಸಜ್ಜಾಗಿದೆ. ಈ ವಿಚಾರವಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಾರ್ಚ್ 19 ರಂದು ರಾಜ್ಯಸಭೆಯಲ್ಲಿ ಮಾಹಿತಿ ನೀಡಿದ್ದರು.

2023-24 ರಲ್ಲಿ ಭಾರತದಲ್ಲಿ ಒಟ್ಟು ಟೋಲ್ ಸಂಗ್ರಹವು 64,809.86 ಕೋಟಿ ರೂ.ಗಳನ್ನು ತಲುಪಿದೆ. ಇದು ಹಿಂದಿನ ವರ್ಷಕ್ಕಿಂತ ಶೇ 35 ರಷ್ಟು ಹೆಚ್ಚಾಗಿದೆ. 2019-20 ರಲ್ಲಿ ಟೋಲ್ ಶುಲ್ಕ ಸಂಗ್ರಹವು 27,503 ಕೋಟಿ ರೂ.ಗಳಷ್ಟಿತ್ತು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಮಾಹಿತಿ ನೀಡಿದ್ದರು. ಕರ್ನಾಟಕದಲ್ಲಿ 66 ಟೋಲ್ ಪ್ಲಾಜಾಗಳಿವೆ.

ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಎಲ್ಲಾ ಟೋಲ್ ಪ್ಲಾಜಾಗಳನ್ನು ‘‘ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮಗಳು, 2008’’ ಮತ್ತು ಸಂಬಂಧಿತ ರಿಯಾಯಿತಿ ಒಪ್ಪಂದದ ಪ್ರಕಾರ ಸ್ಥಾಪಿಸಲಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.


Share It

You cannot copy content of this page