ರಾಜಕೀಯ ಸುದ್ದಿ

ಲಾರಿ ಮುಷ್ಕರಕ್ಕೆ ಸಿಗದ ಜನಬೆಂಬಲ: ಯಥಾಸ್ಥಿತಿಗೆ ಮರಳಿದ ಸಂಚಾರ

Share It

ಬೆಂಗಳೂರು: ಲಾರಿ ಮುಷ್ಕರಕ್ಕೆ ಜನಬೆಂಬಲ ವ್ಯಕ್ತವಾಗದ ಬೆನ್ನಲ್ಲಿ ಲಾರಿ ಮುಷ್ಕರ ಬಹುತೇಕ ಕೊನೆಗೊಂಡಿದ್ದು, ಸಂಚಾರ ಯಥಾಸ್ಥಿತಿಗೆ ಮರಳಿದೆ.

ಡೀಸೆಲ್ ಬೆಲೆ ಇಳಿಕೆ ಮತ್ತು ಟೋಲ್ ದರ ಇಳಿಸುವುದು ಸೇರಿ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಲಾರಿ ಮಾಲೀಕರು ಮುಷ್ಕರಕ್ಕೆ ಇಳಿದಿದ್ದರು. ಕೆಲ ಸಂಘಟನೆಗಳು ತೆಗೆದುಕೊಂಡ ತೀರ್ಮಾನಕ್ಕೆ, ಬಹುತೇಕ ಲಾರಿ ಮಾಲೀಕರು ಮತ್ತು ಚಾಲಕರು ಬೆಂಬಲ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಮುಷ್ಕರ ಬಹುತೇಕ ವಿಫಲವಾಗಿದ್ದು, ಸಂಚಾರ ಯಥಾಸ್ಥಿತಿಗೆ ಮರಳಿದೆ.

ಲಾರಿ ಮಾಲೀಕರ ಬೇಡಿಕೆಗಳ ಬಗ್ಗೆಯೇ ಸಂಘಟನೆಗಳಲ್ಲಿ ಪರ-ವಿರೋಧ ಚರ್ಚೆಗಳು ನಡೆದಿವೆ. ಡೀಸೆಲ್ ದರ ಏರಿಕೆ ಮತ್ತು ಟೋಲ್ ದರ ಏರಿಕೆ ವಿರೋಧಿಸಿ ಪ್ರತಿಭಟನೆ ನಡೆಸುವುದಾದರೆ, ಕೇಂದ್ರ ಸರಕಾರ ಏರಿಕೆ ಮಾಡಿದಾಗ ಯಾಕೆ ಮುಷ್ಕರ ನಡೆಯಲಿಲ್ಲ. ಈಗ ರಾಜ್ಯದ ವಿರುದ್ಧ ಪ್ರತಿಭಟನೆ ಏಕೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಸಂಘಟನೆಯ ಕೆಲ ಮುಖಂಡರು ರಾಜಕೀಯ ಹಿತಾಸಕ್ತಿಗಾಗಿ ಮುಷ್ಕರಕ್ಕೆ ಕರೆ ನೀಡಿದ್ದಾರೆ ಎಂದು ಲಾರಿ ಮಾಲೀಕರು ಕಿಡಿಕಾರಿದ್ದಾರೆ. ಸಹಜವಾಗಿಯೇ ಕೇಂದ್ರ ಸರಕಾರ ಬೆಲೆ ಏರಿಸಿದಾಗ, ರಾಜ್ಯದಲ್ಲಿ ಡೀಸೆಲ್ ಬೆಲೆ, ಟೋಲ್ ದರ ಏರಿಕೆ ಸಾಮಾನ್ಯ. ಇದಕ್ಕೆ ಪ್ರತಿಭಟನೆಯೇ ಪರಿಹಾರವಲ್ಲ ಎಂಬುದು ಒಂದು ಗುಂಪಿನ ವಾದವಾಗಿದೆ.

ಲಾರಿ ಮುಷ್ಕರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿಯೂ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಸತತವಾಗಿ ಡೀಸೆಲ್ ಬೆಲೆ ಏರಿಕೆ ಮಾಡಿದ ಕೇಂದ್ರ ಸರಕಾರದ ಧೋರಣೆ ಖಂಡಿಸಿ, ಇವರು ಎಂದೂ ಪ್ರತಿಭಟನೆ ಮಾಡಿರಲಿಲ್ಲವಲ್ಲ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದರು. ಡಿಸೇಲ್ ಬೆಲೆ ಏರಿಕೆಗೆ ತಕ್ಕಂತೆ ಗ್ರಾಹಕರಿಂದ ಪಡೆಯುವ ಬಾಡಿಗೆ ಮತ್ತಿತರ ಏರಿಕೆ ಮಾಡುವ ಲಾರಿ ಮಾಲೀಕರು, ಅದೇಗೆ ಸಮಸ್ಯೆಗೆ ಸಿಲುಕಿದ್ದಾರೆ ಎಂದು ಕೆಲವರು ಪ್ರಶ್ನೆ ಮಾಡಿದ್ದರು.

ಯಾರೋ ಕೆಲವರು ರಾಜಕೀಯ ಹಿತಾಸಕ್ತಿಯ ಮುಖಂಡರು ಕರೆದಿರುವ ಮುಷ್ಕರವನ್ನು ಲಾರಿ ಮಾಲೀಕರು ಸಂಪೂರ್ಣವಾಗಿ ಬಹಿಷ್ಕರಿಸುವುದು ಲಾರಿಗಳ ಸಂಚಾರದಿಂದ ಗೊತ್ತಾಗುತ್ತಿದೆ. ಆದರೂ, ರಾಜ್ಯ ಸರಕಾರ ಮುಷ್ಕರ ನಡೆಸದಂತೆ ಸಂಘಟಕರ ಜತೆಗೆ ಮಾತುಕತೆ ನಡೆಸಿತ್ತು. ಇದೀಗ ಸ್ವಯಂಪ್ರೇರಿತವಾಗಿ ಲಾರಿಗಳ ಸಂಚಾರ ಆರಂಭವಾಗಿದೆ.


Share It

You cannot copy content of this page