ಕಲಬುರಗಿ: ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡುವ ಹುಚ್ಚು ಮತ್ತೊಂದು ಅಮೂಲ್ಯ ಜೀವವನ್ನು ಕಿತ್ತುಕೊಂಡಿದೆ.
ಟ್ರ್ಯಾಕ್ಟರ್ ಚಲಿಸುತ್ತಿರುವಾಗಲೇ ಮೊಬೈಲ್‌ನಲ್ಲಿ ರೀಲ್ಸ್ ಚಿತ್ರೀಕರಿಸುತ್ತಿದ್ದ ಯುವ ರೈತ, ಕಾಲು ಜಾರಿ ಅದೇ ಟ್ರ್ಯಾಕ್ಟರ್ ಗಾಲಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪುರದಲ್ಲಿ ಬುಧವಾರ ನಡೆದಿದೆ.
ಮೃತನನ್ನು ಕಮಲಾಪುರ ನಿವಾಸಿ ಲೋಕೇಶ್ ಪೂಜಾರಿ (23) ಎಂದು ಗುರುತಿಸಲಾಗಿದೆ. ವೃತ್ತಿಯಿಂದ ಟ್ರ್ಯಾಕ್ಟರ್ ಚಾಲಕನಾಗಿದ್ದ ಲೋಕೇಶ್, ಒಂದು ಕೈಯಲ್ಲಿ ಮೊಬೈಲ್ ಹಿಡಿದು ರೀಲ್ಸ್ ಮಾಡುತ್ತಾ ಮತ್ತೊಂದು ಕೈಯಲ್ಲಿ ಸ್ಟೀರಿಂಗ್ ಹಿಡಿದಿದ್ದ ಎನ್ನಲಾಗಿದೆ. ಈ ವೇಳೆ ಸಮತೋಲನ ತಪ್ಪಿ ಟ್ರ್ಯಾಕ್ಟರ್ ಚಕ್ರದ ಕೆಳಗೆ ಬಿದ್ದಿದ್ದು, ವಾಹನ ದೇಹದ ಮೇಲೆ ಹರಿದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಪಕ್ಕದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತರು ಚಾಲಕರಿಲ್ಲದೇ ಟ್ರ್ಯಾಕ್ಟರ್ ಸಾಗುತ್ತಿರುವುದನ್ನು ಗಮನಿಸಿ ಪರಿಶೀಲಿಸಿದಾಗ ದುರ್ಘಟನೆ ಬೆಳಕಿಗೆ ಬಂದಿದೆ. ವಿಷಯ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಹಾಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

