ಅಪರಾಧ ಸುದ್ದಿ

ಟ್ರಾಫಿಕ್ ಪೊಲೀಸರ ಎಡವಟ್ಟು: ತಾಯಿ ಮಡಿಲಲ್ಲೇ ಪ್ರಾಣ ಬಿಟ್ಟ 3 ವರ್ಷದ ಕಂದಮ್ಮ

Share It

ಮಂಡ್ಯ:ಟ್ರಾಫಿಕ್ ಪೊಲೀಸರ ಎಡವಟ್ಟಿನಿಂದಾಗಿ ಮೂರುವರೆ ವರ್ಷದ ಬಾಲಕಿ ಸಾವನ್ನಪ್ಪಿರುವ ದಾರುಣ ಘಟನೆ ಮಂಡ್ಯ ಜಿಲ್ಲೆಯ ಸ್ವರ್ಣಸಂದ್ರ ಬಳಿಯ ಹಳೇ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನಡೆದಿದೆ.

ಮಂಡ್ಯದ ನಂದ ಸರ್ಕಲ್ ಸಮೀಪ, ಮಿಮ್ಸ್ ಆಸ್ಪತ್ರೆ ಎದುರು ನಡೆದ ಈ ಘಟನೆ ಸಾರ್ವಜನಿಕರಲ್ಲಿ ಆಘಾತ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಗೊರವನಹಳ್ಳಿಯ ವಾಣಿ ಮತ್ತು ಅಶೋಕ್ ದಂಪತಿಯ ಪುತ್ರಿ, ಮೂರುವರೆ ವರ್ಷದ ಹೃತೀಕ್ಷ, ಈ ದುರಂತದಲ್ಲಿ ಪ್ರಾಣ ಕಳೆದುಕೊಂಡ ಬಾಲಕಿ. ಈ ದಂಪತಿ ತಮ್ಮ ಮಗಳಿಗೆ ನಾಯಿ ಕಚ್ಚಿದ್ದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ಬೈಕ್‌ನಲ್ಲಿ ಕರೆತರುತ್ತಿದ್ದರು.

ಆದರೆ, ಹೆಲ್ಮೆಟ್ ತಪಾಸಣೆಗಾಗಿ ಸಂಚಾರಿ ಪೊಲೀಸರು ದಂಪತಿಯ ಬೈಕ್ ಅನ್ನು ಏಕಾಏಕಿ ಅಡ್ಡಗಟ್ಟಿದ್ದಾರೆ. ಈ ಸಂದರ್ಭದಲ್ಲಿ ಬೈಕ್ ಸವಾರನಾದ ಅಶೋಕ್, ಪೊಲೀಸರ ಆಕಸ್ಮಿಕ ಕ್ರಮಕ್ಕೆ ಆಯತಪ್ಪಿ ಬ್ರೇಕ್ ಹಾಕಿದ್ದಾರೆ. ಇದರಿಂದ ಬೈಕ್ ಸಮತೋಲನ ಕಳೆದುಕೊಂಡು ರಸ್ತೆಗೆ ಉರುಳಿದೆ.

ಬೈಕ್‌ನಲ್ಲಿ ತಂದೆ, ತಾಯಿ ಮತ್ತು ಮಗಳ ಜೊತೆಗಿದ್ದ ಹೃತೀಕ್ಷ ಕೂಡ ಕೆಳಗೆ ಬಿದ್ದಿದ್ದಾಳೆ. ದುರಾದೃಷ್ಟವಶಾತ್, ಬಾಲಕಿಯ ತಲೆಯು ನೆಲಕ್ಕೆ ಜೋರಾಗಿ ಅಪ್ಪಳಿಸಿದೆ. ಈ ಘಾತದಿಂದ ತೀವ್ರ ರಕ್ತಸ್ರಾವವಾಗಿ, ತಾಯಿಯ ಮಡಿಲಲ್ಲೇ ಹೃತೀಕ್ಷ ಉಸಿರಾಡುವುದನ್ನು ನಿಲ್ಲಿಸಿದಳು. ಈ ದೃಶ್ಯವನ್ನು ಕಣ್ಣಾರೆ ಕಂಡ ಸಾರ್ವಜನಿಕರು ಮತ್ತು ದಂಪತಿಯ ಆಕ್ರಂದನವು ಮಂಡ್ಯದ ರಸ್ತೆಯಲ್ಲಿ ಮುಗಿಲು ಮುಟ್ಟಿತು.

ಇದೀಗ ಈ ಕೇಸ್ ಗೆ ಸಂಬಂಧಿಸಿ ಸಂಚಾರಿ ಠಾಣೆಯ ಮೂರು ASI ಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಎಎಸ್‌ಐಗಳಾದ ಜಯರಾಮ್ ನಾಗರಾಜ್ ಮತ್ತು ಗುರುದೇವ್ ಅಮಾನತುಗೊಳಿಸಲಾಗಿದೆ ಎಂದು ಮಂಡ್ಯ ಜಿಲ್ಲೆಯ ಎಸ್ಪಿ ಮಲ್ಲಿಕಾರ್ಜುನ್ ಬಾಲದಂಡೆ ಮಾಹಿತಿ ನೀಡಿದ್ದಾರೆ.


Share It

You cannot copy content of this page