ಬೆಂಗಳೂರು: ಹಿರಿಯ ಮೋಟಾರು ವಾಹನ ನಿರೀಕ್ಷಕ ನಿಸಾರ್ ಆಹಮ್ಮದ್ ಅವರು ಗುಜರಾತ್ ರಾಜ್ಯದ ವಾಹನಗಳಿಗೆ ನಿಯಮಬಾಹಿರವಾಗಿ Fitness Certificate ನೀಡಿದ್ದು ಕರ್ತವ್ಯ ಲೋಪ ಎಸಗಿರುವ ಹಿನ್ನೆಲೆಯಲ್ಲಿ ಅವರನ್ನು ಅಮಾನತ್ತು ಮಾಡುವಂತೆ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ, ಶಿಫಾರಸ್ಸು ಮಾಡಿದ್ದು, ಅದರನ್ವಯ ಅಮಾನತುಗೊಳಿಸಿ ಸಾರಿಗೆ ಆಯುಕ್ತರು ಆದೇಶ ಮಾಡಿದ್ದಾರೆ.
ಗುಜರಾತ್ ರಾಜ್ಯದ ಸಾರಿಗೆ ಕಛೇರಿಯ ಇ-ಡಿಟೆಕ್ಷನ್ ತಂಡವು ವಾಹನ ಇ-ಡಿಟೆಕ್ಷನ್ ಪೋರ್ಟಲ್ ನ ಲ್ಲ್ಲಿ ಲಭ್ಯವಿರುವ ಡೇಟಾವನ್ನು ಪರಿಶೀಲಿಸಿ 41 ವಾಹನಗಳನ್ನು ಕರ್ನಾಟಕ ರಾಜ್ಯದ ಆರ್ ಟಿ ಒ ಕಚೇರಿಗಳಲ್ಲಿ ತಪಾಸಣೆ ಮಾಡಿ ನಮೂನೆ-38 (ಎ) (Fitness Certificate] ನೀಡಿದ ನಂತರ, ಅದೇ ದಿನ ಗುಜರಾತ್ ರಾಜ್ಯದಲ್ಲಿರುವ ಟೋಲ್ ಪ್ಲಾಜಾಗಳ ಮೂಲಕ ಸದರಿ ವಾಹನಗಳು ಹಾದುಹೋಗಿವೆ ಎಂದು ಹಾಗೂ ಅವುಗಳನ್ನು ನಿಸಾರ್ ಅಹಮದ್ ಇವರು ಅನುಮೋದಿಸಿರುವುದಾಗಿ ಉಪ ನಿರ್ದೇಶಕರು, ಸಾರಿಗೆ ಆಯುಕ್ತರ ಕಛೇರಿ, ಗಾಂಧಿನಗರ, ಗುಜರಾತ್ ಅವರು ತಿಳಿಸಿದ್ದಾರೆ.
ಈ ವಿಷಯವು ಸಾರಿಗೆ ಹಾಗೂ ಮುಜರಾಯಿ ಸಚಿವರ ಗಮನಕ್ಕೆ ಬಂದ ಕೂಡಲೇ ಈ ಬಗ್ಗೆ ಆಯುಕ್ತರು ಸಾರಿಗೆ ಇಲಾಖೆ ರವರಿಗೆ ಕ್ರಮಕೈಗೊಳ್ಳಲು ಸೂಚಿಸಿದರು. ಅದರಂತೆ ,ಆಯುಕ್ತರು ಬೆಂಗಳೂರು ನಗರ ವಿಭಾಗದ ಜಂಟಿ ಸಾರಿಗೆ ಆಯುಕ್ತರು ಅವರಿಗೆ ವರದಿ ನೀಡಲು ಸೂಚಿಸಿದರು.
ಸದರಿ ವರದಿಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ, ಬೆಂಗಳೂರು (ಕೇಂದ್ರ) ದಲ್ಲಿರುವ ಹಿರಿಯ ಮೋಟಾರು ವಾಹನ ನಿರೀಕ್ಷಕರಾದ ನಿಸ್ಸಾರ್ ಅಹಮದ್, ವಾಹನಗಳಿಗೆ ನಮೂನೆ-38(ಎ) ರಲ್ಲಿ ಅರ್ಹತಾ ಪತ್ರ ನವೀಕರಣ ಮಾಡಿರುವುದಾಗಿ ಇಲಾಖೆ ವಾಹನ್ 4.0 ತಂತ್ರಾಂಶದನ್ವಯ ದೃಢಪಟ್ಟಿರುತ್ತದೆ ಹಾಗೂ ಸದರಿ 41 ವಾಹನಗಳು ಅದೇ ದಿನ ಅಂದರೆ ತಪಾಸಣೆ ನಡೆಸಿದ ದಿನಾಂಕದಂದು ಗುಜರಾತ್ ರಾಜ್ಯದಲ್ಲಿರುವ ಟೋಲ್ ಪ್ಲಾಜಾಗಳ ಮೂಲಕ ಹಾದುಹೋಗಿರುವುದು ಸಹ ಕಂಡುಬಂದಿರುತ್ತದೆ.
ಇದರಿಂದ ವಾಹನಗಳನ್ನು ಭೌತಿಕವಾಗಿ ಪರಿಶೀಲನೆ ಮಾಡದೇ ನಮೂನೆ-38(ಎ) ನ್ನು ನಿಯಮಬಾಹಿರವಾಗಿ ಅನುಮೋದಿಸಿರುವುದು ಕಂಡುಬಂದಿರುತ್ತದೆ. ಇದರಿಂದಾಗಿ ಮೋಟಾರು ವಾಹನಗಳ ಕಾಯ್ದೆ ಮತ್ತು ನಿಯಮಗಳನ್ನು ಉಲಂಘಿಸಿದ್ದು, ವಾಹನಗಳನ್ನು ಭೌತಿಕವಾಗಿ ಪರಿಶೀಲನೆ ಮಾಡದೇ ಅನುಮೋದಿಸುವ ಮೂಲಕ ಕರ್ತವ್ಯ ಲೋಪವೆಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ. ಆದ್ದರಿಂದ ಅವರನ್ನು ಸೇವೆಯಿಂದ ಅಮಾನತ್ತು ಮಾಡಲಾಗಿದೆ ಎಂದು ಆಯುಕ್ತರು ತಮ್ಮ ಆದೇಶದಲ್ಲಿ ತಿಳಿಸಿರುತ್ತಾರೆ.

