ತುಮಕೂರು: ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರೊಬ್ಬರು ಕಚೇರಿಯಲ್ಲೇ ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ಪಾವಗಡ ಪಟ್ಟಣದಲ್ಲಿ ನಡೆದಿದೆ.
ಪಾವಗಡದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್ ಆತ್ಮಹತ್ಯೆಗೆ ಶರಣಾದವರು. ಮಲ್ಲಿಕಾರ್ಜುನ್ ಪಾವಗಡದ ಗುಂಡಾರ್ಲಹಳ್ಳಿ ಮೂಲದವರು. ಪಾವಗಡದ ಸಮಾಜ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸಾವಿಗೂ ಮುನ್ನ ಸೆಲ್ಫಿ ವಿಡಿಯೋ ಮಾಡಿದ್ದಾರೆ.
ಮಲ್ಲಿಕಾರ್ಜುನ್ ಆತ್ಮಹತ್ಯೆಗೆ ಮುನ್ನ ವಿಡಿಯೋ ಮಾಡಿದ್ದು, ತಮ್ಮ ಸಾವಿಗೆ ಮೇಲಧಿಕಾರಿ ಕಾರಣ ಎಂದು ಆರೋಪಿಸಿದ್ದಾರೆ. ನನ್ನ ತಾಯಿ, ಪತ್ನಿ ಮತ್ತು ಮಕ್ಕಳು ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ನನಗೆ ಒಳ್ಳೆಯ ಬೆಲೆ ನೀಡಿದ್ದಾರೆ. ನಾನು ಕೂಡ ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕಿತ್ತು. ಸಹಾಯ ಮಾಡಬೇಕಿತ್ತು. ಆದರೆ, ಸಹಾಯ ಮಾಡಲಾಗುತ್ತಿಲ್ಲ. ಮೇಲಧಿಕಾರಿ ನೀಡಿದ ಕಿರುಕುಳದಿಂದ ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.
ಮಗನ ಸಾವಿನ ಬಗ್ಗೆ ತಾಯಿ ಕೆಂಚಮ್ಮ ಮಾತನಾಡಿದ್ದಾರೆ. ಮಲ್ಲಿಕಾರ್ಜುನ್ ನನ್ನ ಎರಡನೇ ಮಗ. ನನಗೆ ಐದು ಮಕ್ಕಳು. ಊಟಕ್ಕೆ ಬರುವಂತೆ ಫೋನ್ ಮಾಡಿ ಮಾಡಿ ಸಾಕಾಯ್ತು. ಎಷ್ಟು ಬಾರಿ ಫೋನ್ ಮಾಡಿದರೂ ಕರೆ ಸ್ವೀಕರಿಸಲಿಲ್ಲ. ಅನುಮಾನ ಬಂದು ಸಂಬಂಧಿಕರಿಗೆ ಫೋನ್ ಮಾಡಿ ಕೇಳಿದೆವು. ಎಲ್ಲರೂ ನೋಡಿಲ್ಲ, ಇಲ್ಲಿಗೆ ಬಂದಿಲ್ಲ ಎಂದೇ ಹೇಳಿದರು. ಕೊನೆಗೆ ಕಚೇರಿಯಲ್ಲಿ ಹುಡುಕಲು ತೆರಳಿದೆವು. ಅಲ್ಲಿ ನೋಡಿದಾಗ ಬಾಗಿಲು ಹಾಕಿಕೊಂಡಿತ್ತು. ವಾರ್ಡನ್ ಕೂಡ ಬಂದರು ಎಂದು ನೋವು ತೋಡಿಕೊಂಡಿದ್ದಾರೆ.
ದೂರು ಸಲ್ಲಿಸಿದ ಕುಟುಂಬಸ್ಥರು: ಮಲ್ಲಿಕಾರ್ಜುನ್ ಅವರ ಕುಟುಂಬ ಸಲ್ಲಿಸಿದ ದೂರು ಮತ್ತು ಸೆಲ್ಫಿ ವಿಡಿಯೋ ಆಧಾರದ ಮೇಲೆ, ಜಂಟಿ ನಿರ್ದೇಶಕರ ವಿರುದ್ಧ ಭಾರತೀಯ ನ್ಯಾಯ ಸಂಹಿತಾದ ಸೆಕ್ಷನ್ 108ರ ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಲಾಗಿದೆ ಮತ್ತು ಈ ವಿಷಯ ತನಿಖೆಯಲ್ಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಪ್ರಾಥಮಿಕ ಸಂಶೋಧನೆ ಉಲ್ಲೇಖಿಸಿ, ಜಂಟಿ ನಿರ್ದೇಶಕರು ಇತ್ತೀಚೆಗೆ ಮೃತರ ವಿರುದ್ಧ ತನಿಖೆ ಪ್ರಾರಂಭಿಸಿದ್ದಾರೆ. ಅವರು ಕೇವಲ 10 ದಿನಗಳಲ್ಲಿ ನಿವೃತ್ತರಾಗಬೇಕಿತ್ತು. ಇದು ಅವರ ಪಿಂಚಣಿ ಮತ್ತು ಇತರ ಕೆಲಸಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಪರಿಣಾಮ ಬೀರಿರಬಹುದು ಎಂದು ಅಧಿಕಾರಿ ಹೇಳಿದ್ದಾರೆ.

