ಡಿಜಿಟಲ್ ಮಾಧ್ಯಮಗಳ ವೇಗದ ಬೆಳವಣಿಗೆಯು ಭಾರತೀಯ ದೂರದರ್ಶನ ಕ್ಷೇತ್ರದ ಮೇಲೆ ಭಾರೀ ಪ್ರಭಾವ ಬೀರಿದೆ. ವೀಕ್ಷಕರ ಅಭ್ಯಾಸ ಬದಲಾಗುತ್ತಿರುವುದು, ಜಾಹೀರಾತು ಆದಾಯ ಆನ್ಲೈನ್ ಪ್ಲಾಟ್ಫಾರ್ಮ್ಗಳಿಗೆ ವರ್ಗಾವಣೆ ಆಗುತ್ತಿರುವುದು ಹಾಗೂ ನಿರ್ವಹಣಾ ವೆಚ್ಚ ಹೆಚ್ಚುತ್ತಿರುವುದು—ಇವೆಲ್ಲ ಕಾರಣಗಳಿಂದಾಗಿ ಕಳೆದ ಮೂರು ವರ್ಷಗಳಲ್ಲಿ ಸುಮಾರು 50 ದೂರದರ್ಶನ ಚಾನೆಲ್ಗಳು ತಮ್ಮ ಪ್ರಸಾರ ಪರವಾನಗಿಗಳನ್ನು ವಾಪಸ್ ನೀಡಿ ಬಂದ್ ಆಗಿವೆ.
ಒಂದು ಕಾಲದಲ್ಲಿ “ಟಿವಿ ಬಂದ ಮೇಲೆ ಪತ್ರಿಕೆಗಳು ಉಳಿಯುವುದಿಲ್ಲ” ಎನ್ನುವ ಮಾತು ಕೇಳಿಬಂದಿತ್ತು. ಆದರೆ ಕಾಲಚಕ್ರ ತಿರುಗಿದಂತೆ, ಈಗ ಟಿವಿಯೇ ಹೊಸ ಸವಾಲುಗಳನ್ನು ಎದುರಿಸುತ್ತಿದೆ. ಪತ್ರಿಕೆ ಓದುವ ಸಂಸ್ಕೃತಿ ನಿಧಾನವಾಗಿ ಕುಸಿದಂತೆ, ಈಗ ಟಿವಿ ವೀಕ್ಷಣೆಯೂ ಅದೇ ಹಾದಿಯಲ್ಲಿ ಸಾಗುತ್ತಿದೆ. ಸ್ಮಾರ್ಟ್ಫೋನ್, ಟ್ಯಾಬ್ಲೆಟ್, ಕನೆಕ್ಟೆಡ್ ಟಿವಿಗಳ ಮೂಲಕ ಬೇಕಾದ ಕಾರ್ಯಕ್ರಮವನ್ನು ಬೇಕಾದ ಸಮಯದಲ್ಲಿ ನೋಡುವ ಸ್ವಾತಂತ್ರ್ಯ ಜನರಿಗೆ ಲಭ್ಯವಾಗಿದೆ. ಇದರ ಪರಿಣಾಮವಾಗಿ, ಮನೆಯಲ್ಲಿ ಟಿವಿ ಇದ್ದರೂ ರಿಮೋಟ್ ಕೇಳುವವರೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.
ವೀಕ್ಷಕರ ಸಂಖ್ಯೆ ಕುಸಿತ, ಜಾಹೀರಾತು ಡಿಜಿಟಲ್ ಕಡೆಗೆ: ಡಿಜಿಟಲ್ ಪ್ಲಾಟ್ಫಾರ್ಮ್ಗಳತ್ತ ಜನರು ಹೆಚ್ಚು ಆಕರ್ಷಿತರಾಗುತ್ತಿರುವ ಹಿನ್ನೆಲೆಯಲ್ಲಿ, ಸಾಂಪ್ರದಾಯಿಕ ಟಿವಿ ಚಾನೆಲ್ಗಳ ವೀಕ್ಷಕರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ವೀಕ್ಷಕರು ಕಡಿಮೆಯಾದಂತೆ ಜಾಹೀರಾತು ಸಂಸ್ಥೆಗಳೂ ತಮ್ಮ ಬಜೆಟ್ ಅನ್ನು ಡಿಜಿಟಲ್ ಮಾಧ್ಯಮಗಳತ್ತ ತಿರುಗಿಸುತ್ತಿವೆ. ಟಿವಿ ಚಾನೆಲ್ಗಳ ಪ್ರಮುಖ ಆದಾಯ ಮೂಲವೇ ಜಾಹೀರಾತುಗಳಾಗಿರುವುದರಿಂದ, ಈ ಬದಲಾವಣೆಗಳು ಚಾನೆಲ್ಗಳ ಆರ್ಥಿಕ ಸ್ಥಿತಿಗೆ ದೊಡ್ಡ ಹೊಡೆತ ನೀಡಿವೆ.
ಇದರ ನಡುವೆ, ವೀಕ್ಷಕರಿದ್ದರೂ ಇಲ್ಲದಿದ್ದರೂ ಕೇಬಲ್ ಮತ್ತು ಡಿಟಿಎಚ್ ನೆಟ್ವರ್ಕ್ಗಳಿಗೆ ಚಾನೆಲ್ಗಳು ಪಾವತಿಸಬೇಕಾದ ಭಾರೀ ಬಾಡಿಗೆ ವೆಚ್ಚವು ಮತ್ತೊಂದು ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ ಹಲವಾರು ಚಾನೆಲ್ಗಳು ತಮ್ಮ ಕಾರ್ಯಾಚರಣೆ ಮುಂದುವರಿಸಲು ಅಸಾಧ್ಯವಾಗುತ್ತಿದೆ.
ಪ್ರಮುಖ ನೆಟ್ವರ್ಕ್ಗಳೂ ನಿರ್ಧಾರಕ್ಕೆ: ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಂಕಿಅಂಶಗಳನ್ನು ಉಲ್ಲೇಖಿಸಿ ಪ್ರಕಟವಾದ ವರದಿಗಳ ಪ್ರಕಾರ, ಜಿಯೋಸ್ಟಾರ್, ಜೀ ಎಂಟರ್ಟೈನ್ಮೆಂಟ್, ಈನಾಡು ಟೆಲಿವಿಷನ್, ಟಿವಿ ಟುಡೇ ನೆಟ್ವರ್ಕ್ ಮತ್ತು ಎಬಿಪಿ ನೆಟ್ವರ್ಕ್ ಸೇರಿದಂತೆ ಹಲವು ದೊಡ್ಡ ಸಂಸ್ಥೆಗಳು ತಮ್ಮ ಕೆಲವು ಚಾನೆಲ್ಗಳ ಪರವಾನಗಿಗಳನ್ನು ವಾಪಸ್ ನೀಡಿವೆ.
ಇದಲ್ಲದೆ, ಸೋನಿ ಪಿಕ್ಚರ್ಸ್ ನೆಟ್ವರ್ಕ್ಸ್ ಇಂಡಿಯಾದ ಪೋಷಕ ಸಂಸ್ಥೆಯಾಗಿರುವ ಕಲ್ವರ್ ಮ್ಯಾಕ್ಸ್ ಎಂಟರ್ಟೈನ್ಮೆಂಟ್ ಕಂಪನಿಯೂ ಅಪ್ಲಿಂಕ್ ಮತ್ತು ಡೌನ್ಲಿಂಕ್ ಅನುಮತಿಗಳನ್ನು ಪಡೆದಿದ್ದ 26 ಚಾನೆಲ್ಗಳ ಪರವಾನಗಿಗಳನ್ನು ಬಿಟ್ಟುಕೊಟ್ಟಿದೆ ಎಂದು ವರದಿಗಳು ತಿಳಿಸುತ್ತವೆ.
ಡಿಟಿಎಚ್ ವಲಯಕ್ಕೂ ಹಿನ್ನಡೆ: ಕ್ರಿಸಿಲ್ ಸಂಸ್ಥೆ ಬಿಡುಗಡೆ ಮಾಡಿದ ವರದಿ ಪ್ರಕಾರ, ಖಾಸಗಿ ಡಿಟಿಎಚ್ ಟಿವಿ ಪೂರೈಕೆದಾರರ ಆದಾಯ ಕಳೆದ ಹಣಕಾಸು ವರ್ಷದಲ್ಲಿ ಶೇಕಡಾ 3–4ರಷ್ಟು ಕುಸಿತ ಕಂಡಿದೆ. 2019ರಲ್ಲಿ 7.2 ಕೋಟಿ ಇದ್ದ ಡಿಟಿಎಚ್ ಚಂದಾದಾರರ ಸಂಖ್ಯೆ 2024ಕ್ಕೆ 6.19 ಕೋಟಿಗೆ ಇಳಿಕೆಯಾಗಿದೆ. 2025ರ ವೇಳೆಗೆ ಇದು ಇನ್ನೂ ಶೇಕಡಾ 9ರಷ್ಟು ಕುಸಿತ ಕಂಡಿದ್ದು, ಪ್ರಸ್ತುತ ಹಣಕಾಸು ವರ್ಷದ ಅಂತ್ಯದ ವೇಳೆಗೆ 5.1 ಕೋಟಿಗಿಂತ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಯಾವ ಚಾನೆಲ್ಗಳು ಬಂದ್?: ಲಭ್ಯ ಮಾಹಿತಿಯಂತೆ, ಜಿಯೋಸ್ಟಾರ್ ಸಂಸ್ಥೆ ಕಲರ್ಸ್ ಒಡಿಯಾ, ಎಂಟಿವಿ ಬೀಟ್ಸ್, ವಿಎಚ್1 ಮತ್ತು ಕಾಮಿಡಿ ಸೆಂಟ್ರಲ್ ಸೇರಿದಂತೆ ಕೆಲವು ಚಾನೆಲ್ಗಳ ಪರವಾನಗಿಗಳನ್ನು ಆಂತರಿಕ ವ್ಯಾಪಾರ ನಿರ್ಧಾರಗಳ ಹಿನ್ನೆಲೆಯಲ್ಲಿ ವಾಪಸ್ ನೀಡಿದೆ. ಜೀ ಎಂಟರ್ಟೈನ್ಮೆಂಟ್ ಸಂಸ್ಥೆ ತನ್ನ ಜೀ ಸೀ ಚಾನೆಲ್ನ್ನು ಬಂದ್ ಮಾಡಿದೆ. ಅದೇ ರೀತಿ, ಎಂಟರ್10 ಮೀಡಿಯಾ ಸಂಸ್ಥೆ ವ್ಯವಹಾರ ಹಾಗೂ ಸಂಪನ್ಮೂಲ ಮಿತಿಗಳ ಕಾರಣದಿಂದಾಗಿ ದಂಗಲ್ ಎಚ್ಡಿ ಮತ್ತು ದಂಗಲ್ ಒರಿಯಾ ಸೇರಿದಂತೆ ಕೆಲವು ಚಾನೆಲ್ಗಳ ಪರವಾನಗಿಗಳನ್ನು ತ್ಯಜಿಸಿದೆ.
ಡಿಜಿಟಲ್ನ ಮೇಲುಗೈ: ಡಿಜಿಟಲ್ ಪ್ಲಾಟ್ಫಾರ್ಮ್ಗಳಲ್ಲಿ ಜಾಹೀರಾತು ವೆಚ್ಚ ಕಡಿಮೆ, ಗುರಿ ಪ್ರೇಕ್ಷಕರಿಗೆ ನಿಖರವಾಗಿ ತಲುಪುವ ತಂತ್ರಜ್ಞಾನ ಲಭ್ಯ, ಹಾಗೂ ಬಳಕೆದಾರರ ಆಸಕ್ತಿಗೆ ತಕ್ಕ ಜಾಹೀರಾತು ಪ್ರದರ್ಶಿಸುವ ಸಾಮರ್ಥ್ಯ ಇರುವುದರಿಂದ, ಜಾಹೀರಾತುದಾರರು ಆನ್ಲೈನ್ ಮಾಧ್ಯಮಗಳತ್ತ ಹೆಚ್ಚು ಒಲವು ತೋರುತ್ತಿದ್ದಾರೆ. ಈ ಎಲ್ಲ ಅಂಶಗಳು ಸೇರಿ, ಸಾಂಪ್ರದಾಯಿಕ ಟಿವಿ ಚಾನೆಲ್ಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿವೆ.
ಒಟ್ಟಿನಲ್ಲಿ, ಡಿಜಿಟಲ್ ಯುಗದ ಈ ಬದಲಾವಣೆಗಳು ಭಾರತೀಯ ದೂರದರ್ಶನ ಕ್ಷೇತ್ರವನ್ನು ಹೊಸ ದಿಕ್ಕಿನಲ್ಲಿ ಚಿಂತನೆ ಮಾಡಲು ಒತ್ತಾಯಿಸುತ್ತಿವೆ. ಮುಂದಿನ ದಿನಗಳಲ್ಲಿ ಟಿವಿ ಮಾಧ್ಯಮಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೊಸ ಮಾದರಿಗಳತ್ತ ಹೆಜ್ಜೆ ಇಡುವ ಅನಿವಾರ್ಯತೆ ಎದುರಾಗುತ್ತಿದೆ.

