ಬೆಂಗಳೂರು: ತೆರೆದಿದ್ದ ಮನೆಯ ಸೊಂಪ್‌ಗೆ ಬಿದ್ದು ಎರಡೂವರೆ ವರ್ಷದ ಮಗು ಸಾವನ್ನಪ್ಪಿರುವ ಘಟನೆ ನಗರದ ಬ್ಯಾಡರಹಳ್ಳಿಯಲ್ಲಿ ನಡೆದಿದೆ.
ಬ್ಯಾಡರಹಳ್ಳಿಯ ಅಣ್ಣಯ್ಯ ಎಂಬುವವರ ಮನೆಯ ಸೊಂಪ್‌ನಲ್ಲಿ ಈ ಘಟನೆ ನಡೆದಿದ್ದು, ತಂದೆ ಅಣ್ಣಯ್ಯ ಸೊಂಪ್ ತೆರೆದು, ಮುಚ್ಚಳ ಮುಚ್ಚುವುದನ್ನು ಮರೆತು ತೆರಳಿದ್ದರು. ಅಲ್ಲಿಗೆ ಓಡಿಬಂದ ಅವರ ಎರಡೂವರೆ ವರ್ಷದ ಗಂಡು ಮಗು ಸೋಂಪ್‌ನೊಳಗೆ ಬಿದ್ದು, ನೀರು ಕುಡಿದು ಮೃತಪಟ್ಟಿದೆ ಎಂದು ವರದಿಯಾಗಿದೆ.
ಅಣ್ಣಯ್ಯ ಮತ್ತು ಋತು ಎಂಬುವವರ ಪುತ್ರ ಚಿರಾಗ್ ಮೃತ ಬಾಲಕ. ನೆನ್ನೆ ಕಾರು ತೊಳೆಯಲು ಸೊಂಪ್ ತೆಗೆದಿದ್ದ ಅಣ್ಣಯ್ಯ ಅದನ್ನು ಮತ್ತೆ ಮುಚ್ಚಲು ಮರೆತಿದ್ದರು. ಹೀಗಾಗಿ, ಇಂದು ಬೆಳಗ್ಗೆ ಆಟವಾಡುತ್ತಾ ಸೊಂಪ್ ಬಳಿಗೆ ಬಂದ ಚಿರಾಗ್ ಅದರೊಳಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾನೆ. ಮಾದನಾಯಕಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

