ದೇವಸ್ಥಾನದ ಜೀರ್ಣೋದ್ಧಾರದ ಲೆಕ್ಕಾಚಾರ: ಎರಡು ಗುಂಪುಗಳ ನಡುವೆ ಮಾರಾಮಾರಿ
ಬೆಂಗಳೂರು: ದೇವಸ್ಥಾನದ ಜೀರ್ಣೋದ್ಧಾರದ ಲೆಕ್ಕಾಚಾರದ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ನಡೆದ ಮಾರಾಮಾರಿ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ಬ್ಯಾಲದಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಎರಡು ಗುಂಪುಗಳು ದೊಣ್ಣೆ, ಮಚ್ಚು ಹಿಡಿದು ಬಡಿದಾಡಿಕೊಂಡ ವಿಡಿಯೋ ಇದೀಗ ವೈರಲ್ ಆಗಿದೆ. ಪ್ರಕರಣ ಸಂಬಂಧ ಕೆ.ಆರ್. ಪೇಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ಯಾಲದಕೆರೆ ಗ್ರಾಮದಲ್ಲಿ ಅಮೃತೇಶ್ವರ ಮತ್ತು ಭೈರವೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಮಾಡಲಾಗಿತ್ತು. ಇದಕ್ಕಾಗಿ ಗ್ರಾಮಸ್ಥರು ಮತ್ತು ದಾನಿಗಳ ಸಹಾಯದಿಂದ 50 ಲಕ್ಷ ರು. ಸಂಗ್ರಹ ಮಾಡಲಾಗಿತ್ತು. ಆದರೆ, ಈ ಹಣದ ಲೆಕ್ಕಾಚಾರದ ವಿಚಾರ ಇದೀಗ ಬಡಿದಾಟಕ್ಕೆ ಕಾರಣವಾಗಿದೆ.
ಒಂದು ಗುಂಪು ಹಣದ ಲೆಕ್ಕಾಚಾರ ಕೇಳಿದ್ದು, ಇದರಿಂದ ಕೋಪಗೊಂಡ ಜೀರ್ಣೋದ್ಧಾರ ಸಮಿತಿ ಸದಸ್ಯರು ಗಲಾಟೆಗೆ ಮುಂದಾಗಿದ್ದಾರೆ. ಈ ವೇಳೆ ಎರಡು ಗುಂಪಿನ ಜನರು ಪರಸ್ಪರ ದೊಣ್ಣೆ, ಯಡಮಟ್ಟೆಗಳನ್ನು ಬಳಸಿ ಹೊಡೆದಾಡಿಕೊಂಡಿದ್ದಾರೆ. ಮಹಿಳೆಯರು ಹೊಡೆದಾಟ ನೋಡಿ ಕಿರುಚಾಡುತ್ತಾ ಅಳುತ್ತಿರುವ ದೃಶ್ಯ ವಿಡಿಯೋಗಳಲ್ಲಿ ಸೆರೆಯಾಗಿದೆ.
ಈ ಸಂಬಂಧ ಕೆ.ಆರ್. ಪೇಟೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಅನೇಕರು ಗಾಯಗೊಂಡಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.


