ಬೆಂಗಳೂರು: ದಸರಾಗೆ ಸಚಿವ ಸಂಪುಟ ವಿಸ್ತರಣೆ ಮಾಡಲು ಕಾಂಗ್ರೆಸ್ ತೀರ್ಮಾನಿಸಿದ್ದು, ಅಷ್ಟರಲ್ಲಿ ಸುಧಾರಿಸಿಕೊಂಡು ಕೆಲಸ ಮಾಡಿದವರಿಗೆ ಸಿಹಿ ಸಿಗಲಿದೆ, ಇಲ್ಲದಿದ್ದರೆ ಆಯುಧಪೂಜೆ ಕಾದಿದೆಯಂತೆ.
ಸಿಎಂ ನಿವಾಸದಲ್ಲಿ ಸಭೆ ನಡೆಸಿದ ಕೆ.ಸಿ.ವೇಣುಗೋಪಾಲ್ ಮತ್ತು ರಣದೀಪ್ ಸರ್ಜೇವಾಲಾ, ಎಲ್ಲ ಸಚಿವರಿಗೆ ಇಂತಹ ಎಚ್ಚರಿಕೆ ನೀಡಿದ್ದಾರೆ ಎಂಬುದು ಗೊತ್ತಾಗಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಕೆಲ ಸಚಿವರು ಸರಿಯಾಗಿ ಕೆಲಸ ಮಾಡಿಲ್ಲ. ಮಾಡಿದ್ದರೆ, 15 ಸ್ಥಾನಗಳನ್ನು ಗೆಲ್ಲಬಹುದಿತ್ತು ಎಂದು ಗುಡುಗಿದ್ದಾರೆ ಎನ್ನಲಾಗಿದೆ.
ದಸರಾ ವೇಳೆಗೆ ನಿಮ್ಮ ಕಾರ್ಯವೈಖರಿಯಲ್ಲಿ ಬದಲಾವಣೆ ಕಾಣದಿದ್ದರೆ ನಿಮ್ಮನ್ನೇ ಬದಲಾವಣೆ ಮಾಡಬೇಕಾದೀತು ಎಂದು ಎಚ್ಚರಿಕೆ ನೀಡಿದ್ದಾರೆ. ನಿಮ್ಮ ಕಾರ್ಯವೈಖರಿ ಜಿಲ್ಲೆ ಮತ್ತು ಉಸ್ತುವಾರಿ ಜಿಲ್ಲೆಗೆ ಮಾತ್ರ ಸೀಮಿತವಾಗಿದೆ. ಉಸ್ತುವಾರಿ ಬಿಟ್ಟು, ಉಳಿದ ಜಿಲ್ಲೆಗಳಿಗೂ ಗಮನಕೊಟ್ಟು ಕೆಲಸ ಮಾಡಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ವಿರುದ್ಧ ಮೂಡಾ ಹಗರಣದ ವಿಚಾರದಲ್ಲಿ ಒಟ್ಟಾಗಿ ಹೋರಾಟ ಮಾಡಬೇಕು. ರಾಜ್ಯಪಾಲರ ನಡೆಯನ್ನು ಸಮರ್ಥವಾಗಿ ಎದುರಿಸಲು ಹೋರಾಟ ರೂಪಿಸಬೇಕು. ನಿಮ್ಮ ನಿಮ್ಮ ಇಲಾಖೆಗಳಲ್ಲಿ ಸುಧಾರಣೆಗಳನ್ನು ತರುವ ಮೂಲಕ ರಾಜ್ಯಾದ್ಯಂತ ಜನಾಭಿಪ್ರಾಯ ರೂಪಿಸಬೇಕು. ಇಂತಹ ಕೆಲಸಕ್ಕೆ ಹೈಕಮಾಂಡ್ ನಿಮ್ಮ ಜತೆ ನಿಲ್ಲಲಿದೆ ಎಂದು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.