ಹುಬ್ಬಳ್ಳಿ: ಧಾರವಾಡ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿ, ಸ್ಕೂಟಿ ಸವಾರರಿಬ್ಬರು ಸಾವನ್ನಪ್ಪಿದ ಘಟನೆ ತಡರಾತ್ರಿ ನಡೆದಿದೆ. ಮೃತರನ್ನು ಧಾರವಾಡದ ಗೌಳಿ ಗಲ್ಲಿಯ ಕಿಶನ್ ಖಾನವಾಲೆ (೩೦) ಮತ್ತು ಕಿರಣ ಖಡವಾಕರ್(೩೨) ಎಂದು ಗುರುತಿಸಲಾಗಿದೆ.
ಧಾರವಾಡ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಯರಿಕೊಪ್ಪ ಬಳಿ ಮಿಶ್ರಾಪೇಡಾ ಮುಂಭಾಗ ಸ್ಕೂಟಿ ಹಾಗೂ ಲಾರಿ ನಡುವೆ ಡಿಕ್ಕಿ ಸಂಭವಿಸಿದ್ದು, ಸ್ಕೂಟಿ ಸವಾರರು ಲಾರಿ ಚಕ್ರದಡಿ ಸಿಲುಕಿದ್ದಾರೆ. ಪರಿಣಾಮ ಮೃತದೇಹಗಳು ರಸ್ತೆಯಲ್ಲಿ ಛಿದ್ರಗೊಂಡು ಬಿದ್ದಿದ್ದವು.
ಘಟನೆಯ ಬಳಿಕ ಸ್ಥಳೀಯರು ಗ್ರಾಮೀಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಅಪಘಾತದಿಂದ ಕೆಲಕಾಲ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಸ್ಥಳೀಯರ ಮಾಹಿತಿ ಆಧರಿಸಿ ಸ್ಥಳಕ್ಕೆ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಮೃತದೇಹಗಳನ್ನು ತೆರವುಗೊಳಿಸಿ, ಆಸ್ಪತ್ರೆಗೆ ರವಾನಿಸಿದ್ದಾರೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಬ್ಬಳ್ಳಿ-ಧಾರವಾಡ ರಾಷ್ಟ್ರೀಯ ಹೆದ್ದಾರಿಯಲ್ಲಿ ಪದೇ ಪದೇ ಅಪಘಾತಗಳು ನಡೆಯುತ್ತಿದ್ದು, ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಅಪಘಾತಕ್ಕೆ ಕಡಿವಾಣ ಹಾಕಬೇಕು ಎನ್ನುವುದು ಅವಳಿ ನಗರದ ಜನತೆಯ ಆಗ್ರಹ.

