ರಾಜಕೀಯ ಸುದ್ದಿ

ಸಚಿವ ನಾಗೇಂದ್ರ ರಾಜೀನಾಮೆಗೆ ಉಮೇಶ್ ಜಾಧವ್ ಆಗ್ರಹ

Share It

ಕಲಬುರಗಿ: ವಾಲ್ಮೀಕಿ ಪರಿಶಿಷ್ಟ ಪಂಗಡಗಳ ನಿಗಮದಲ್ಲಿ ನಡೆದಿರುವ ಭ್ರಷ್ಟಾಚಾರದ ನೈತಿಕ ಹೊಣೆ ಹೊತ್ತು ಜೂ.6 ರೊಳಗೆ ಸಚಿವ ನಾಗೇಂದ್ರ ರಾಜೀನಾಮೆ ನೀಡಬೇಕು ಎಂದು ಸಂಸದ ಡಾ. ಉಮೇಶ ಜಾಧವ್ ಕಲಬುರಗಿಯಲ್ಲಿ ಆಗ್ರಹ ಮಾಡಿದ್ದಾರೆ.

ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂಬುದು ನಿಗಮದ ಅಧಿಕಾರಿಯೊಬ್ಬರ ರಾಜೀನಾಮೆಯಿಂದ ಸಾಭೀತಾಗಿದೆ. ರಾಜ್ಯ ಸರ್ಕಾರ ಭ್ರಷ್ಟಾಚಾರದ ಪರ ನಿಂತಿದ್ದು, ಭ್ರಷ್ಟರನ್ನು ರಕ್ಷಿಸುವ ಕೆಲಸ ಮಾಡುತ್ತಿದೆ. ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆಯುತ್ತದೆ ಎಂಬ ನಂಬಿಕೆ ನಮಗಿಲ್ಲ. ಹೀಗಾಗಿ, ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಬೇಕು ಎಂದು ಒತ್ತಾಯಿಸಿದರು.

ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಚಿವ ನಾಗೇಂದ್ರ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು. ಬೇಕಾದರೆ, ಪ್ರಕರಣದಲ್ಲಿ ಕ್ಲೀನ್‌ಚಿಟ್ ಬಂದ ಮೇಲೆ ಮತ್ತೆ ಸಚಿವ ಸ್ಥಾನ ನೀಡಲಿ, ಚುನಾವಣೆಯಲ್ಲಿ 40 ಪರ್ಸೇಂಟ್ ಸರ್ಕಾರ ಎಂದು ಸುಳ್ಳು ಆರೋಪ ಮಾಡಿ, ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಈಗ ಅದೆಷ್ಟು ಪರ್ಸೆಂಟ್ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದೇ ಗೊತ್ಥಾಗುತ್ತಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು.

ರಾಜ್ಯ ಸರಕಾರದ ಭ್ರಷ್ಟಾಚಾರವನ್ನು ವಿರೋಧಿಸಿ, ಜೂ. 6 ರಂದು ಬಿಜೆಪಿ ವತಿಯಿಂದ ರಾಜ್ಯ ಸರ್ಕಾರದ ವಿರುದ್ದ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ಅಷ್ಟರೊಳಗೆ ನಾಗೇಂದ್ರ ರಾಜೀನಾಮೆ ಪಡೆಯದಿದ್ದರೆ, ಕಾಂಗ್ರೆಸ್ ಸರಕಾರದ ವಿರುದ್ಧ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್‌ಗೆ ಗೊತ್ತು ನಮ್ಮ ಸರ್ಕಾರ ಕೇಂದ್ರದಲ್ಲಿ ಬರಲ್ಲ ಅಂತ, ಅದಕ್ಕೆ ಸುಳ್ಳು ಭರವಸೆ ನೀಡುತ್ತಿದ್ದಾರೆ. ಹೆಣ್ಣು ಮಕ್ಕಳಿಗೆ ಸುಳ್ಳು ಭರವಸೆ ನೀಡಿ, ಅವರೆಲ್ಲ ಬ್ಯಾಂಕ್ ಮುಂದೆ ಬಂದು ನಿಲ್ಲುವಂತೆ ಮಾಡಿದ್ದಾರೆ. ಇಂತಹ ಯಾವುದೇ ಗಿಮಿಕ್ ಮಾಡಿದರೂ ಮತ್ತೊಮ್ಮೆ ಮೋದಿ ಸರಕಾರ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಜಾಧವ್ ವಿಶ್ವಾಸ ವ್ಯಕ್ತಪಡಿಸಿದರು.


Share It

You cannot copy content of this page