ಅಪರಾಧ ಸುದ್ದಿ

ಚಿಕಿತ್ಸೆ ವೆಚ್ಚ ಭರಿಸಲಾಗದೆ ಗಾಯಗೊಂಡಿದ್ದ ಸ್ನೇಹಿತನನ್ನೇ ಕಲ್ಲುಕಟ್ಟಿ ಬಾವಿಗೆಸೆದ ದುಷ್ಕರ್ಮಿಗಳು

Share It

ರಾಮನಗರ: ಹೊಸ ವರ್ಷದ ಸಂದರ್ಭದಲ್ಲಿ ಜತೆಯಲ್ಲೇ ಕುಡಿದು, ಮರದಿಂದ ಬಿದ್ದ ಸ್ನೇಹಿತನ ವೈದ್ಯಕೀಯ ಚಿಕಿತ್ಸಾ ವೆಚ್ಚ ಭರಿಸಬೇಕಾಗುತ್ತದೆ ಎಂಬ ಭಯದಿಂದ ಆತನನ್ನು ಕೊಲೆ ಮಾಡಿ, ಬಾವಿಗೆ ಬಿಸಾಕಿರುವ ಅಮಾನವೀಯ ಘಟನೆ ಮಾಗಡಿ ತಾಲೂಕಿನ ವಾಜರಹಳ್ಳಿ ಜರುಗಿದೆ.

ಘಟನೆ ಜನವರಿ 1 ರಂದೇ ನಡೆದಿದ್ದು, ಶವ ಬಾವಿಯಲ್ಲಿದ್ದ ಕಾರಣ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈಜಲು ಬಾವಿಗಿಳಿದ ಯುವಕರು ನೀಡಿದ ಮಾಹಿತಿಯ ಮೇರೆಗೆ ಶವ ಹೊರತೆಗೆದು ವಿಚಾರಣೆ ನಡೆಸಿದಾಗ ಪ್ರಕರಣ ಬಯಲಿಗೆ ಬಂದಿದೆ.

ಮೃತ ಯುವಕ ತಾಲೂಕಿನ ಕಲ್ಯಾಣ ಪುರ ಗ್ರಾಮದ ದಿನಗೂಲಿ ಕಾರ್ಮಿಕ ವಿನೋದ್ ಕುಮಾರ್ (26) ಎಂದು ಗುರುತಿಸಲಾಗಿದೆ. ಬಂಧಿತರು ಅದೇ ಗ್ರಾಮದ ಸುದೀಪ್ ಮತ್ತು ಖಾಸಗಿ ಕಂಪನಿಯಲ್ಲಿ ಕಾರು ಚಾಲಕ ಪ್ರಜ್ವಲ್ ಎಂದು ಗುರುತಿಸಲಾಗಿದೆ.

ಈ ಮೂವರು ಸ್ನೇಹಿತರು ಹೊಸ ವರ್ಷದ ಸಂಭ್ರಮಾಚರಣೆಗೆ ಗ್ರಾಮಕ್ಕೆ ತೆರಳಿದ್ದರು. ಈ ವೇಳೆ, ಮದ್ಯ ಸೇವನೆ ಮಾಡಲು ಎಳನೀರು ಬೇಕು, ತೆಂಗಿನ ಮರ ಹತ್ತುವಂತೆ ಮೃತ ವಿನೋದ್‌ಗೆ ತಿಳಿಸಿದ್ದಾರೆ. ಈ ವೇಳೆ, ಮರ ಹತ್ತಿದ್ದ ವಿನೋದ್ ಆಯತಪ್ಪಿ ಕೆಳಗೆ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದಾನೆ.

ನೋವಿನಿAದ ವಿನೋದ್ ಕೂಗಲು ಆರಂಭಿಸುತ್ತಿದ್ದAತೆ ಭಯಭೀತರಾದ ಇಬ್ಬರೂ ಮನೆಗೆ ಕರೆದುಕೊಂಡು ಹೋಗಲು ನಿರ್ಧರಿಸಿ, ನಂತರ ದಾರಿ ಮಧ್ಯೆ ಗ್ರಾಮಸ್ಥರು ಪ್ರಶ್ನಿಸಿದರೆ, ವೈದ್ಯಕೀಯ ಚಿಕಿತ್ಸೆ ವೆಚ್ಚ ನಾವೇ ಭರಿಸಬೇಕು. ಲಕ್ಷಾಂತರ ವೆಚ್ಚವಾಗುತ್ತದೆ ಎಂದು ಚಿಂತಿಸಿ, ವಿನೋದ್‌ನನ್ನು ಕೆರೆಗೆ ಎಸೆದಿದ್ದಾರೆ. ನಂತರ ಶವವನ್ನು ಹೊರತೆಗೆದು, ತಂತಿ ಬಳಸಿ ಕಲ್ಲಿಗೆ ಶವವನ್ನು ಕಟ್ಟಿ ಶವ ಮೇಲಕ್ಕೆ ಬಾರದ ಹಾಗೆ ಬಾವಿಗೆ ಎಸೆದಿದ್ದಾರೆ.

ಹೊಸವರ್ಷಾಚರಣೆಗೆ ಹೋದ ಯುವಕ ಮನೆಗೆ ಬರದ ಕಾರಣ ಆತನ ಅಜ್ಜ ಜ. 2 ರಂದು ಮಾಗಡಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಹುಡುಕಾಟ ನಡೆಸಿದ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಜ. 17 ರಂದು, ಬಾವಿಯಲ್ಲಿ ಈಜಲು ಹೋದ ಕೆಲ ಯುವಕರು ಶವವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದು, ಶವವನ್ನು ಮೇಲಕ್ಕೆ ತೆಗೆದಾಗ ಅದು ವಿನೋದ್ ಶವ ಎಂದು ಗೊತ್ತಾಗಿದೆ.

ಆಗ ಪೊಲೀಸರು, ಕೊನೆಯ ಬಾರಿಗೆ ಆತನೊಂದಿಗಿದ್ದ ಸ್ನೇಹಿತರನ್ನು ವಿಚಾರಣೆ ನಡೆಸಿದಾಗ ಕೃತ್ಯ ಬಯಲಾಗಿದೆ. ರಾಮನಗರ ಎಸ್‌ಪಿ ಶ್ರೀನಿವಾಸ್ ಗೌಡ ಆದೇಶದನ್ವಯ ಮಾಗಡಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.


Share It

You cannot copy content of this page