ಮನೆಯೊಂದರಲ್ಲಿ ದಾಖಲೆಯಿಲ್ಲದ ಭಾರೀ ನಗದು, ಒಡವೆ ವಶ
ಬಳ್ಳಾರಿ: ಜಿಲ್ಲೆಯಲ್ಲಿ ಮನೆಯೊಂದರಲ್ಲಿ ಇಟ್ಟುಕೊಂಡಿದ್ದಂತ ದಾಖಲೆಯಿಲ್ಲದ 5.60 ಕೋಟಿ ಹಣ, 3 ಕೆಜಿ ಬಂಗಾರ, 103 ಕೆಜಿ ಬೆಳ್ಳಿಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಬಳ್ಳಾರಿಯ ಬ್ರೂಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಮನೆಯೊಂದರಲ್ಲಿ ದಾಖಲೆಯಿಲ್ಲದ ಹಣ, ಚಿನ್ನಾಭರಣ ಇರಿಸಿಕೊಂಡಿರೋ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಈ ಖಚಿತ ಮಾಹಿತಿಯ ಮೇರೆಗೆ ಬಳ್ಳಾರಿ ಡಿವೈಎಸ್ಪಿ ಮತ್ತು ಬ್ರೂಸ್ ಪೇಟೆಯ ಪೊಲೀಸರು ದಾಳಿ ನಡೆಸಿದ್ದಾರೆ.
ಬಳ್ಳಾರಿ ನಗರದ ಕಂಬಳಿ ಬಜಾರ್ ನ ಆಭರಣದ ಅಂಗಡಿಯ ಮಾಲೀಕರ ಮನೆಯ ಮೇಲೆ ಇಂದು ದಾಳಿ ನಡೆಸಿದ್ದು, ದಾಳಿಯ ವೇಳೆಯಲ್ಲಿ ಮನೆಯಲ್ಲಿ 5.60 ಕೋಟಿ ರೂ. ಹಣ, 2 ಕೋಟಿ ರೂ. ಮೌಲ್ಯದ 3 ಕೆಜಿ ಚಿನ್ನ, 103 ಕೆಜಿ ಬೆಳ್ಳಿ ಹಾಗೂ 21 ಕೆಜಿ ಕಚ್ಚಾ ಬೆಳ್ಳಿ ಗಟ್ಟಿಯನ್ನು ಜಪ್ತಿ ಮಾಡಿದ್ದಾರೆ. ಇದರ ಒಟ್ಟು ಮೌಲ್ಯ 7.5 ಕೋಟಿ ರೂಪಾಯಿ ಎನ್ನಲಾಗುತ್ತಿದೆ.
ಸೂಕ್ತ ದಾಖಲೆಯಿಲ್ಲದೇ ಮನೆಯಲ್ಲಿ ಇರಿಸಿಕೊಂಡಿದ್ದ ಮಾಲೀಕ ನರೇಶ್ ಎಂಬುವರನ್ನು ವಶಕ್ಕೆ ಪಡೆದು, ಪೊಲೀಸರು ವಿಚಾರಣೆ ಕೂಡ ನಡೆಸುತ್ತಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಅವರು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.