ಉಪಯುಕ್ತ ಸುದ್ದಿ

UPSC ನಾಗರಿಕ ಸೇವಾ ಪರೀಕ್ಷೆ ಫಲಿತಾಂಶ ಪ್ರಕಟ: ಅನುಜ್ ಅಗ್ನಿಹೋತ್ರಿ ಅಖಿಲ ಭಾರತ ಮೊದಲ ಸ್ಥಾನ

Share It

ಒಟ್ಟು 958 ಅಭ್ಯರ್ಥಿಗಳಿಗೆ ಐಎಎಸ್, ಐಪಿಎಸ್ ಸೇರಿದಂತೆ ವಿವಿಧ ಸೇವೆಗಳಿಗೆ ಅವಕಾಶ; ಕರ್ನಾಟಕದ ಕಿರಣ್ ಕಮಾಟೆ ರಾಜ್ಯದ ಟಾಪರ್

ಕೇಂದ್ರ ಲೋಕಸೇವಾ ಆಯೋಗ (UPSC) 2025ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯ ಅಂತಿಮ ಫಲಿತಾಂಶವನ್ನು ಪ್ರಕಟಿಸಿದ್ದು, ದೇಶದಾದ್ಯಂತ ಅಭ್ಯರ್ಥಿಗಳ ನಿರೀಕ್ಷೆಗೆ ತೆರೆ ಬಿದ್ದಿದೆ. ಈ ವರ್ಷ ನಡೆದ ಪ್ರತಿಷ್ಠಿತ ಪರೀಕ್ಷೆಯಲ್ಲಿ ಅನುಜ್ ಅಗ್ನಿಹೋತ್ರಿ ಅಖಿಲ ಭಾರತ ಮಟ್ಟದಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ರಾಜೇಶ್ವರಿ ಸುವೆ ಎಂ ಎರಡನೇ ಸ್ಥಾನ ಹಾಗೂ ಆಕಾಶ್ ಧುಲ್ ಮೂರನೇ ಸ್ಥಾನ ಗಳಿಸಿ ಗಮನ ಸೆಳೆದಿದ್ದಾರೆ.

ಈ ಪರೀಕ್ಷೆಯ ಪ್ರಕ್ರಿಯೆ ಕಳೆದ ವರ್ಷದ ಮೇ 25ರಂದು ನಡೆದ ಪೂರ್ವಭಾವಿ ಪರೀಕ್ಷೆಯಿಂದ ಆರಂಭವಾಗಿತ್ತು. ನಂತರ ಆಗಸ್ಟ್ 22ರಿಂದ 31ರವರೆಗೆ ಮುಖ್ಯ ಪರೀಕ್ಷೆ ನಡೆಯಿತು. ಅದರಲ್ಲಿ ಯಶಸ್ವಿಯಾದ 2,736 ಅಭ್ಯರ್ಥಿಗಳನ್ನು ಅಂತಿಮ ಸಂದರ್ಶನ ಹಂತಕ್ಕೆ ಆಹ್ವಾನಿಸಲಾಗಿತ್ತು. ಜನವರಿ 5ರಿಂದ ಫೆಬ್ರವರಿ 27ರವರೆಗೆ ನಡೆದ ಸಂದರ್ಶನಗಳ ನಂತರ ಇದೀಗ ಅಂತಿಮ ಫಲಿತಾಂಶ ಪ್ರಕಟವಾಗಿದೆ.

ಈ ಬಾರಿ ಒಟ್ಟು 958 ಅಭ್ಯರ್ಥಿಗಳು ಭಾರತೀಯ ಆಡಳಿತ ಸೇವೆ (IAS), ಭಾರತೀಯ ಪೊಲೀಸ್ ಸೇವೆ (IPS), ಭಾರತೀಯ ವಿದೇಶಾಂಗ ಸೇವೆ (IFS) ಸೇರಿದಂತೆ ವಿವಿಧ ಕೇಂದ್ರ ಸೇವೆಗಳಿಗೆ ಆಯ್ಕೆಯಾಗಿದ್ದಾರೆ.

ನೇಮಕಾತಿಯ ವಿವರಗಳ ಪ್ರಕಾರ, 180 ಅಭ್ಯರ್ಥಿಗಳು ಐಎಎಸ್ ಸೇವೆಗೆ ಆಯ್ಕೆಯಾಗಿದ್ದು, 150 ಅಭ್ಯರ್ಥಿಗಳು ಐಪಿಎಸ್ ಮತ್ತು 55 ಅಭ್ಯರ್ಥಿಗಳು ಐಎಫ್‌ಎಸ್ ಸೇವೆಗೆ ನೇಮಕವಾಗಲಿದ್ದಾರೆ. ಐಎಎಸ್ ಹುದ್ದೆಗಳಲ್ಲಿ 74 ಸಾಮಾನ್ಯ ವರ್ಗದ ಅಭ್ಯರ್ಥಿಗಳು, 47 ಒಬಿಸಿ, 28 ಪರಿಶಿಷ್ಟ ಜಾತಿ, 13 ಪರಿಶಿಷ್ಟ ಪಂಗಡ ಹಾಗೂ 18 ಅಭ್ಯರ್ಥಿಗಳು ಇಡಬ್ಲ್ಯೂಎಸ್ ವರ್ಗದಡಿ ಸ್ಥಾನ ಪಡೆದಿದ್ದಾರೆ.

ಇನ್ನು ಕರ್ನಾಟಕದಿಂದ ಈ ವರ್ಷ 22 ಅಭ್ಯರ್ಥಿಗಳು ಯಶಸ್ಸು ಸಾಧಿಸಿದ್ದಾರೆ. ಅವರಲ್ಲಿ ಕಿರಣ್ ಕಮಾಟೆ ದೇಶದ ಮಟ್ಟದಲ್ಲಿ 53ನೇ ಸ್ಥಾನ ಪಡೆದು ರಾಜ್ಯದ ಅಗ್ರ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ.

ಈ ಪರೀಕ್ಷೆಯ ಅಧಿಕೃತ ಅಂಕಪಟ್ಟಿಗಳನ್ನು ಯುಪಿಎಸ್‌ಸಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಮುಂದಿನ ಸುಮಾರು 15 ದಿನಗಳೊಳಗೆ ಪ್ರಕಟಿಸುವ ನಿರೀಕ್ಷೆಯಿದೆ.


Share It

You cannot copy content of this page