ಉಪಯುಕ್ತ ಸುದ್ದಿ

ಕನ್ನಡದ ಬಳಕೆ ಸರಕಾರದ ಪ್ರಾಧಿಕಾರ ಮತ್ತು ಅಧಿಕಾರಿಗಳ ಕರ್ತವ್ಯ: ಹೈಕೋರ್ಟ್

Share It

ಬೆಂಗಳೂರು: ಸ್ಥಳೀಯ ಭಾಷೆಯಾದ ಕನ್ನಡದ ಬೆಳವಣಿಗೆಗೆ ಸರಕಾರದ ಪ್ರಾಧಿಕಾರ ಮತ್ತು ಅಧಿಕಾರಿಗಳು ಅದನ್ನು ಬಳಸುವ ರೀತಿ ಅತ್ಯಂತ ಸಹಾಯಕ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಲೋಕಾಯುಕ್ತ ಸಂಸ್ಥೆಯಲ್ಲಿ ದಿನನಿತ್ಯದ ವ್ಯವಹಾರದಲ್ಲಿ ಕನ್ನಡ ಬಳಕೆ ಕುರಿತು ನಿರ್ದೇಶನ ನೀಡುವಂತೆ ಸಲ್ಲಿಸಿದ್ದ ಅರ್ಜಿದಾರರ ಮನವಿಯನ್ನು ತಿರಸ್ಕರಿಸಿದ ಹೈಕೋರ್ಟ್, ಸರ್ಕಾರದ ಪ್ರಾಧಿಕಾರಗಳು ಮತ್ತು ಅಧಿಕಾರಿಗಳು ಅದನ್ನು ಬಳಸಿ ಪ್ರೋತ್ಸಾಹಿಸಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿತು.

ಮುಖ್ಯನ್ಯಾಯಮೂರ್ತಿ ಅನ್.ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ ಅರವಿಂದ್ ಅವರಿದ್ದ ಪೀಠದ ಮುಂದೆ, ಸಾಮಾಜಿಕ ಕಾರ್ಯಕರ್ತ ಗುರುನಾಥ್ ವಡ್ಡೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಗೆ ಬಂದಿತ್ತು. ಆದರೆ, ಅರ್ಜಿದಾರರು ಮನವಿಯನ್ನು ಪುರಸ್ಕರಿಸಲು ಪೀಠ ಒಪ್ಪಲಿಲ್ಲ.

ಸರಕಾರದ ಪ್ರಾಧಿಕಾರದಲ್ಲಿ ಅಧಿಕಾರಿಗಳ ಕನ್ನಡ ಬಳಕೆಯನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕು. ಸಾಧ್ಯವಾದಷ್ಟು ಸ್ಥಳೀಯ ಭಾಷೆಗೆ ಹೆಚ್ಚಿನ ಮಹತ್ವವನ್ನು ಕೊಡಬೇಕು. ಆಗ ಮಾತ್ರ ಸ್ಥಳೀಯ ಭಾಷೆ ಉಳಿಸಲು ಮತ್ತು ಬೆಳೆಸಲು ಸಾಧ್ಯವಾಗುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿತು.

ನನಗೆ ಕನ್ನಡ ಬರುವುದಿಲ್ಲ: ಹಾಗಾದರೆ, ಗತಿಯೇನು?: ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಅಂಜಾರಿಯಾ, ನನಗೆ ಕನ್ನಡ ಬರುವುದಿಲ್ಲ. ಅರ್ಜಿದಾರರ ಮನವಿ ಪುರಸ್ಕರಿಸಿದರೆ ಮುಖ್ಯ ನ್ಯಾಯಮೂರ್ತಿಗಳ ನ್ಯಾಯಪೀಠ, ಹೇಗೆ ಕಾರ್ಯನಿರ್ವಹಿಸಲು ಸಾಧ್ಯ ಕೋರ್ಟ್ ಕಾರ್ಯನಿರ್ವಹಿಸುವುದು ಬೇಡವೇ ಎಂದು ಪ್ರಶ್ನಿಸಿದರು. ಸರ್ಕಾರದಲ್ಲಿ ಏಕ ಭಾಷೆ ಬಳಕೆಗೆ ಸಾರ್ವತ್ರಿಕ ಸೂತ್ರವಿಲ್ಲ. ಹೀಗಾಗಿ ಕನ್ನಡ ಭಾಷೆಯಿರುವಲ್ಲಿ ಆಂಗ್ಲಭಾಷೆ ಬಳಕೆ ಅಗತ್ಯವಿದ್ದು ಬಳಸಿದರೆ ಅದಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದರು.

ಸರ್ಕಾರಿ ವ್ಯವಹಾರಗಳಲ್ಲಿ ಯಾವ ಭಾಷೆ ಬಳಸಬೇಕೆಂಬ ನೀತಿ ಅನುಕೂಲತೆಯ ವಿಷಯ. ಕನ್ನಡ ಭಾಷೆ ಸ್ಥಳೀಯ ಭಾಷೆ. ಅದಕ್ಕೆ ಪ್ರಾಮುಖ್ಯತೆ ನೀಡಿ ಪ್ರೋತ್ಸಾಹಿಸಬೇಕು. ಆದರೆ, ಈ ಅಂಶಗಳು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಪುರಸ್ಕರಿಸಲು ಅರ್ಹವಾಗುವುದಿಲ್ಲ ಎಂದು ಪೀಠ ಉಲ್ಲೇಖಿಸಿತು.


Share It

You cannot copy content of this page