ಶಿರಸಿ : ಉಗ್ರವಾದಿ ಸಂಘಟನೆಯತ್ತ ಯುವಕರನ್ನು ಸೆಳೆಯುವ ಮೂಲಕ ಪಾಕ್ ಮೂಲದ ಉಗ್ರ ಸಂಘಟನೆ ಲಷ್ಕರ್-ಇ-ತೊಯ್ಬಾಗೆ ಸೇರ್ಪಡೆಗೊಳಿಸುವ ಸಂಚು ರೂಪಿಸಿದ್ದ ಆರೋಪದಡಿ, ಉತ್ತರ ಕನ್ನಡ ಜಿಲ್ಲೆ ಶಿರಸಿ ನಿವಾಸಿಯೊಬ್ಬನಿಗೆ ವಿಶೇಷ ಎನ್‌ಐಎ ನ್ಯಾಯಾಲಯ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.
ಶಿಕ್ಷೆ ವಿಧಿಸಲ್ಪಟ್ಟ ಅಪರಾಧಿ ಸಯ್ಯದ್ ಎಂ. ಇದ್ರಿಸ್ ಎಂದು ಗುರುತಿಸಲಾಗಿದ್ದು, ಭಾರತೀಯ ದಂಡ ಸಂಹಿತೆ ಹಾಗೂ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPI) ಅಡಿ ನ್ಯಾಯಾಲಯ ತೀರ್ಪು ನೀಡಿದೆ. ಜೈಲು ಶಿಕ್ಷೆಯ ಜತೆಗೆ ಅಪರಾಧಿಗೆ 70 ಸಾವಿರ ರೂ. ದಂಡವನ್ನೂ ವಿಧಿಸಿದೆ.
ಈ ಪ್ರಕರಣ 2020ರ ಎಪ್ರಿಲ್‌ನಲ್ಲಿ ಪಶ್ಚಿಮ ಬಂಗಾಳ ಪೊಲೀಸರಿಂದ ದಾಖಲಾಗಿದ್ದು, ನಂತರ ಹೆಚ್ಚಿನ ತನಿಖೆಗಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಗೆ ಹಸ್ತಾಂತರಿಸಲಾಗಿತ್ತು. ತನಿಖೆ ವೇಳೆ ಎನ್‌ಐಎ ಶಿರಸಿಯಲ್ಲಿ ಸಯ್ಯದ್ ಇದ್ರಿಸ್ ಹಾಗೂ ಜಮ್ಮು ಕಾಶ್ಮೀರ ನಿವಾಸಿ ಅಲ್ತಾಫ್ ಅಹ್ಮದ್ ರಾಥೆರ್ ಎಂಬ ಆರೋಪಿಗಳನ್ನು ಬಂಧಿಸಿತ್ತು.
NIA ಆರೋಪದಂತೆ, ಈ ಇಬ್ಬರು ತಾನಿಯಾ ಪರ್ವೀನ್ ಎಂಬ ಮಹಿಳೆಯೊಂದಿಗೆ ಸೇರಿ ಪಶ್ಚಿಮ ಬಂಗಾಳದಲ್ಲಿ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆ ಘಟಕ ಸ್ಥಾಪಿಸಲು ಸಂಚು ರೂಪಿಸಿದ್ದರು. ಪಶ್ಚಿಮ ಬಂಗಾಳದ ಉತ್ತರ ಪರಗಣ ಜಿಲ್ಲೆ ಬದೂರಿಯಾ ಪ್ರದೇಶದಲ್ಲಿ ತಾನಿಯಾ ಪರ್ವೀನ್‌ನನ್ನು ಪೊಲೀಸರು ಬಂಧಿಸಿದ್ದರು.
ಶೋಧದ ವೇಳೆ ಕಾನೂನುಬಾಹಿರ ಸಾಹಿತ್ಯ ಸೇರಿ ಹಲವು ಅಕ್ರಮ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಪ್ರಕರಣದ ವಿಚಾರಣೆ ಪೂರ್ಣಗೊಂಡ ಬಳಿಕ, ನ್ಯಾಯಾಲಯ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕಠಿಣ ಶಿಕ್ಷೆ ವಿಧಿಸಿದೆ.

