ಬೆಂಗಳೂರು: ಉತ್ತರನ ಪೌರುಷ ಒಲೆಯ ಮುಂದೆ ಎಂಬಂತೆ 11 ವರ್ಷದಿಂದ ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೂ, ಏನೂ ಮಾಡಲಾಗದ ಬಿಜೆಪಿ ನಾಯಕರು ಬಿಟ್ಟಿ ಟೀಕೆ ಮಾಡುತ್ತಿದ್ದಾರೆ ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಗುಡುಗಿದ್ದಾರೆ.
ಬೆಂಗಳೂರು ಮಿನಿ ಬಾಂಗ್ಲಾ ಎಂದು ಟೀಕೆ ಮಾಡಿರುವ ಬಿಜೆಪಿ ನಾಯಕ ಆರ್.ಅಶೋಕ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ಬಿಜೆಪಿ 11 ವರ್ಷದಿಂದ ಅಧಿಕಾರದಲ್ಲಿದೆ. ಬಾಂಗ್ಲಾ ದೇಶದವರು ಗಡಿಯೊಳಗೆ ಬರಲು ಯಾಕೆ ಬಿಟ್ಟರು. ಗೃಹ ಇಲಾಖೆ ಅವರ ಕೈಯಲ್ಲಿದೆಯಲ್ಲ ಏನು ಮಾಡಿದರು ಎಂದು ಪ್ರಶ್ನಿಸಿದ್ದಾರೆ.
ಹನ್ನೊಂದು ವರ್ಷದಲ್ಲಿ ನೀವು ಏನು ಕಡಿದು ಕಟ್ಟೆ ಹಾಕಿದ್ದೀರಿ, ದೇಶದಲ್ಲಿ ಬಾಂಗ್ಲಾ ಮತ್ತು ಪಾಕಿಸ್ತಾನದ ಪ್ರಜೆಗಳಿದ್ದರೆ ಗಡಿಪಾರು ಮಾಡಿ, ಅದಕ್ಕೆ ನಮ್ಮ ಪಕ್ಷ ಬೆಂಬಲ ನೀಡುತ್ತದೆ. ಅದನ್ನು ಬಿಟ್ಟು, ಏನೂ ಮಾಡಲಾಗದ ನೀವು ಕರ್ನಾಟಕದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡಬೇಡಿ ಎಂದಿದ್ದಾರೆ.
ರಾಜ್ಯದಲ್ಲಿ ಕನ್ನಡದವರನ್ನು ಬಿಟ್ಟು ಉಳಿದವರನ್ನು ಓಡಿಸಿ ಎಂಬAತೆ ಮಾತನಾಡುತ್ತಾರೆ. ಇತರೆ ಭಾಷಿಕರನ್ನು ಓಡಿಸುವುದು ಬಿಜೆಪಿ ಹುನ್ನಾರ. ಇಲ್ಲಿ ಎಲ್ಲರೂ ಅನ್ಯೋನ್ಯತೆಯಿಂದ ಬದುಕುತ್ತಿದ್ದಾರೆ. ಬೆಂಗಳೂರಿನಲ್ಲಿ ಮೊದಲು ಇದ್ದ ಜನಸಂಖ್ಯೆ, ಈಗಿರುವ ಜನಸಂಖ್ಯೆಗೆ ವ್ಯತ್ಯಾಸವಿದೆ ಎಂದು ತಿಳಿಸಿದರು.
ಅಕ್ರಮ ವಲಸಿಗರು ನೆಲೆಸಿದ್ದಾರೆ ಎಂದು ಸುಳ್ಳು ಹೇಳಿ ಜನರನ್ನು ದಾರಿತಪ್ಪಿಸುವ ಬದಲು, ಬಾಂಗ್ಲಾ, ಪಾಕಿಸ್ತಾನದ ಪ್ರಜೆಗಳು ಅಕ್ರಮವಾಗಿ ನೆಲೆಸಿದ್ದರೆ ಕ್ರಮ ಕೈಗೊಳ್ಳಿ. ಅದನ್ನು ಬಿಟ್ಟು ಸುಮ್ಮನೆ ಶಾಂತಿ ಕದಡುವ ಪ್ರಯತ್ನ ನಡೆಸಬೇಡಿ ಎಂದು ಸಲಹೆ ನೀಡಿದರು.

