ಬೆಂಗಳೂರು: ವಾಲ್ಮೀಕಿ ನಿಗಮದ 187 ಕೋಟಿ ರೂಪಾಯಿ ಹಗರಣ ಪ್ರಕರಣದಲ್ಲಿ ನನಗೆ ಕೇಂದ್ರ ಜಾರಿ ನಿರ್ದೇಶನಾಲಯದ ನೋಟಿಸ್ ಬಂದೇ ಇಲ್ಲ, ಹಾಗಾಗಿ ನಾನು ಇಡಿ ವಿಚಾರಣೆಗೆ ಹೆದರಿ ತಲೆಮರೆಸಿಕೊಳ್ಳಲು ಹೇಗೆ ಸಾಧ್ಯ? ಎಂದು ಪ್ರತಿಕ್ರಿಯೆ ನೀಡಿದ್ದ ರಾಯಚೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ್ ಅವರಿಗೆ ಇಡಿ ಶಾಕ್ ಕೊಟ್ಟಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಸನಗೌಡ ದದ್ದಲ್ ಅವರಿಗೆ ಇಂದು ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಇಡಿ ನೋಟಿಸ್ ನೀಡಿದೆ. ಹಾಗಾಗಿ ವಾಲ್ಮೀಕಿ ಅಭಿವೃದ್ಧಿ ನಿಗಮದ 187.33 ಕೋಟಿ ರೂಪಾಯಿ ಹಗರಣದ ಬಗ್ಗೆ ನಿಗಮದ ಅಧ್ಯಕ್ಷರಾಗಿರುವ ಶಾಸಕ ಬಸನಗೌಡ ದದ್ದಲ್ ಅವರು ಇಡಿ ವಿಚಾರಣೆ ಎಂಬ ಇಕ್ಕಳಕ್ಕೆ ಸಿಲುಕಿದ್ದಾರೆ.
ಬಲ್ಲಮೂಲಗಳ ಪ್ರಕಾರ ಮಾಜಿ ಸಚಿವ ಬಿ.ನಾಗೇಂದ್ರ ಅವರಂತೆ ವಾಲ್ಮೀಕಿ ನಿಗಮದ ಹಗರಣದ ಬಗ್ಗೆ ಸುದೀರ್ಘ ಮತ್ತು ಸತತ ವಿಚಾರಣೆ ನಡೆಸಿ ಕೊನೆಯಲ್ಲಿ ಬಂಧಿಸಲು ಇಡಿ ಮುಂದಾಗಿದೆ ಎಂದು ತಿಳಿದುಬಂದಿದೆ.
