ಬೆಂಗಳೂರು: ರಾಜ್ಯದ ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದಾದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಗಂಭೀರ ಹಣಕಾಸು ಅಕ್ರಮ ಬೆಳಕಿಗೆ ಬಂದಿದೆ. ರೋಗಿಗಳ ಅನುಕೂಲಕ್ಕಾಗಿ ಜಾರಿಗೆ ತಂದಿದ್ದ ಯುಪಿಐ ಆಧಾರಿತ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡು, ಆಸ್ಪತ್ರೆಯ ಕೆಲ ಸಿಬ್ಬಂದಿಗಳು ಸುಮಾರು 23 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ತಮ್ಮ ವೈಯಕ್ತಿಕ ಖಾತೆಗಳಿಗೆ ವರ್ಗಾಯಿಸಿಕೊಂಡಿರುವುದು ಪತ್ತೆಯಾಗಿದೆ. ಈ ಸಂಬಂಧ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣದ ತನಿಖೆ ಪ್ರಾರಂಭವಾಗಿದೆ.
ಇತ್ತೀಚೆಗೆ ಆಸ್ಪತ್ರೆಯಲ್ಲಿ ಲ್ಯಾಬ್ ಪರೀಕ್ಷೆಗಳು, ಹೊರರೋಗಿ ಸೇವೆಗಳು (OPD), ಎಕ್ಸ್-ರೇ ಸೇರಿದಂತೆ ವಿವಿಧ ಚಿಕಿತ್ಸಾ ಸೇವೆಗಳಿಗಾಗಿ ನಗದು ರಹಿತ ಪಾವತಿಯನ್ನು ಉತ್ತೇಜಿಸಲು ಯುಪಿಐ ಸ್ಕ್ಯಾನ್ ವ್ಯವಸ್ಥೆಯನ್ನು ಪರಿಚಯಿಸಲಾಗಿತ್ತು. ಆದರೆ ಇದೇ ವ್ಯವಸ್ಥೆಯನ್ನೇ ಅಕ್ರಮಕ್ಕೆ ಬಳಸಿಕೊಂಡ ಕೆಲ ಸಿಬ್ಬಂದಿಗಳು, ಆಸ್ಪತ್ರೆಯ ಅಧಿಕೃತ ಕ್ಯೂಆರ್ ಕೋಡ್ ಬದಲಾಗಿ ತಮ್ಮ ವೈಯಕ್ತಿಕ ಯುಪಿಐ ಕ್ಯೂಆರ್ ಕೋಡ್‌ಗಳನ್ನು ವಿವಿಧ ವಿಭಾಗಗಳ ಗೋಡೆಗಳಲ್ಲಿ ಅಂಟಿಸಿದ್ದರು.
ರೋಗಿಗಳು ಹಾಗೂ ಅವರ ಕುಟುಂಬದವರು ಇದನ್ನು ಗಮನಿಸದೇ ಹಣ ಪಾವತಿಸಿದ ಪರಿಣಾಮ, ಪಾವತಿ ಮೊತ್ತ ನೇರವಾಗಿ ಆಸ್ಪತ್ರೆಯ ಖಾತೆಗೆ ಹೋಗದೆ, ಸಂಬಂಧಿಸಿದ ಸಿಬ್ಬಂದಿಗಳ ವೈಯಕ್ತಿಕ ಬ್ಯಾಂಕ್ ಖಾತೆಗಳಿಗೆ ಜಮೆಯಾಗುತ್ತಿತ್ತು. ಈ ವಂಚನೆ ಲ್ಯಾಬೋರೇಟರಿ, ಓಪಿಡಿ ಹಾಗೂ ಎಕ್ಸ್-ರೇ ವಿಭಾಗಗಳಲ್ಲಿ ನಿರಂತರವಾಗಿ ನಡೆದಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಆಸ್ಪತ್ರೆಯ ಆದಾಯ ಲೆಕ್ಕಪತ್ರಗಳಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ವೈದ್ಯಕೀಯ ಅಧೀಕ್ಷಕರಿಗೆ ಅನುಮಾನ ಉಂಟಾಯಿತು. ಈ ಹಿನ್ನೆಲೆ ಆಸ್ಪತ್ರೆಯೊಳಗೆ ಆಂತರಿಕ ತನಿಖಾ ಸಮಿತಿಯನ್ನು ರಚಿಸಿ, ಯುಪಿಐ ಪಾವತಿ ವ್ಯವಸ್ಥೆಯ ಪರಿಶೀಲನೆ ನಡೆಸಲಾಯಿತು. ಹಲವು ವಾರಗಳ ಪರಿಶೀಲನೆಯ ನಂತರ, ಕೆಲ ಸಿಬ್ಬಂದಿಗಳು ವೈಯಕ್ತಿಕ ಕ್ಯೂಆರ್ ಕೋಡ್ ಬಳಸಿಕೊಂಡು ಹಣ ಸಂಗ್ರಹಿಸುತ್ತಿರುವುದು ದೃಢಪಟ್ಟಿದೆ.
ಸಾಕ್ಷ್ಯಾಧಾರಗಳೊಂದಿಗೆ ವೈದ್ಯಕೀಯ ಅಧೀಕ್ಷಕರು ವಿ.ವಿ.ಪುರಂ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ವಂಚನೆಯಲ್ಲಿ ಭಾಗಿಯಾಗಿರುವ ಸಿಬ್ಬಂದಿಗಳ ಸಂಖ್ಯೆ, ಹಣದ ಹರಿವು ಹಾಗೂ ಅಕ್ರಮ ನಡೆದ ಅವಧಿ ಕುರಿತು ಪೊಲೀಸರು ವಿವರವಾಗಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಬಿಎಂಟಿಸಿ ಬಸ್‌ಗಳಲ್ಲಿ ನಡೆದ ಯುಪಿಐ ವಂಚನೆಯ ಬೆನ್ನಲ್ಲೇ, ಇದೀಗ ಸರ್ಕಾರಿ ಆಸ್ಪತ್ರೆಯಲ್ಲೂ ಇಂತಹ ಅಕ್ರಮ ಬೆಳಕಿಗೆ ಬಂದಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಸರ್ಕಾರಿ ಸಂಸ್ಥೆಗಳಲ್ಲಿ ಜಾರಿಗೆ ತಂದಿರುವ ಡಿಜಿಟಲ್ ಪಾವತಿ ವ್ಯವಸ್ಥೆಗಳ ಮೇಲಿನ ನಂಬಿಕೆಯನ್ನು ಪುನಃ ಬಲಪಡಿಸಲು ಮುಂದಿನ ದಿನಗಳಲ್ಲಿ ಆರೋಗ್ಯ ಇಲಾಖೆ ಮತ್ತು ಸರ್ಕಾರ ಯಾವ ರೀತಿಯ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಿದೆ ಎಂಬುದರ ಬಗ್ಗೆ ಜನರು ಕಾದು ನೋಡುತ್ತಿದ್ದಾರೆ.

