ಬೆಂಗಳೂರು: ಥಿಯೇಟರ್‌ನ ಶೌಚಾಲಯದಲ್ಲಿ ಮಹಿಳೆಯರ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಧ್ಯಾ ಥಿಯೇಟರ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಮಡಿವಾಳ ಪೊಲೀಸ್ ಠಾಣೆಯಲ್ಲಿ ಸಂಧ್ಯಾ ಥಿಯೇಟರ್ ಮಾಲೀಕರ ವಿರುದ್ಧ ದೂರು ದಾಖಲಾಗಿದ್ದು, ರಾಜೇಶ್ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಮಹಿಳಾ ಟೆಕ್ಕಿಯೊಬ್ಬರು ನೀಡಿದ್ದ ದೂರಿನ ಮೇರೆಗೆ ಆತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟೆಕ್ಕಿಯೊಬ್ಬರು ಸ್ನೇಹಿತೆಯರ ಜತೆಗೆ ಸಿನಿಮಾ ವೀಕ್ಷಣೆಗೆ ತೆರಳಿದ್ದರು. ವಿರಾಮದ ವೇಳೆ ಶೌಚಾಲಯಕ್ಕೆ ತೆರಳಿದ್ದಾಗ ರಾಜೇಶ್ ಎಂಬ ವ್ಯಕ್ತಿಯೊಬ್ಬ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡುವುದು ಕಂಡುಬಂದಿದೆ. ಇದನ್ನು ಕಂಡು ಯುವತಿಯರು ಆತನನ್ನು ಹಿಡಿದುಕೊಂಡರು ಎನ್ನಲಾಗಿದೆ.
ಆತನನ್ನು ಹಿಡಿದು ಥಿಯೇಟರ್ ಮಾಲೀಕರ ಬಳಿ ಕರೆದೊಯ್ದ ಟೆಕ್ಕಿಗಳು, ಅನಂತರ ವಿಚಾರಣೆ ನಡೆಸಿದಾಗ ಕಮಲ್ ಎಂಬಾತ ವಿಡಿಯೋ ಮಾಡಲು ಹೇಳಿದ್ದಾನೆ ಎಂದು ಬಾಯ್ಬಿಟ್ಟಿದ್ದಾನೆ. ಹೀಗಾಗಿ, ರಾಜೇಶ್, ಕಮಲ್ ಹಾಗೂ ಥಿಯೇಟರ್ ವಿರುದ್ಧ ಪ್ರಕರಣ ದಾಖಲಾಗಿದೆ.
ಮಡಿವಾಳ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಮೊಬೈಲ್‌ನಲ್ಲಿ ಹಲವು ಯುವತಿಯರ ವಿಡಿಯೋಗಳು ಇರುವುದು ಪತ್ತೆಯಾಗಿದೆ. ಈತ ಹವಲು ದಿನಗಳಿಂದ ವಿಡಿಯೋ ಚಿತ್ರೀಕರಣ ಮಾಡಿರುವ ಶಂಕೆಯಿದ್ದು, ಮಡಿವಾಳ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

