ಮಂಡ್ಯ: ವರ್ಷಗಳಿಂದ ಊರಿಗೆ ಬಸ್ ಬೇಕು ಎಂಬ ಮಂಡ್ಯ ಜಿಲ್ಲೆ ಮದನಘಟ್ಟ ಗ್ರಾಮದ ಜನರ ಕನಸು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಮುತುವರ್ಜಿಯಿಂದ ನನಸಾಗಿದೆ.
ಮಂಡ್ಯದಿಂದ ಮದನಘಟ್ಟ ಗ್ರಾಮಕ್ಕೆ ನಿತ್ಯ ಎರಡು ಅವಧಿಯಲ್ಲಿ ಬಸ್ ಸಂಚಾರ ಆರಂಭವಾಗಿದೆ. ಕಂಬದಹಳ್ಳಿ, ಮಳೆ, ಮುದ್ದಿನ ಘಟ್ಟ,
ಹೇಮಾವತಿ ಕ್ವಾಟ್ರಸ್, ಬಸರಾಳು, ಮಂಡ್ಯಕ್ಕೆ ಬಸ್ ಸಂಚರಿಸಲಿದೆ. ಈ ಭಾಗದ ಗ್ರಾಮಸ್ಥರು ಸಾರಿಗೆ ಸಚಿವರಿಗೆ ಮನವಿ ಪತ್ರ ಸಲ್ಲಿಸಿದ್ದರು. ಮನವಿಗೆ ಸ್ಪಂದಿಸಿದ ಸಚಿವರು, ಬಸ್ ಸಂಚಾರ ವ್ಯವಸ್ಥೆಯನ್ನು ಆರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಗ್ರಾಮಕ್ಕೆ ಹೊಸ ಬಸ್ ಯುಗಾದಿ ಹಬ್ಬದ ದಿನವೇ ಆಗಮಿಸಿದ್ದು, ಈ ಭಾಗದ ಗ್ರಾಮಸ್ಥರೆಲ್ಲ ಹಬ್ಬದ ರೀತಿಯಲ್ಲಿ ಸಂಭ್ರಮಿಸಿದರು. ಬಸ್ ಗೆ ಮಾವಿನ ತೋರಣ, ಹೂವುಗಳ ಅಲಂಕಾರ ಮಾಡಿ ಪೂಜೆ ನೆರವೇರಿಸಿದರು. ಬಸ್ ಆಗಮಿಸುವ ರಸ್ತೆಯುದ್ದಕ್ಕೂ ಜನರು ನಿಂತು, ಆರತಿ ಬೆಳಗಿ ಬಸ್ ಅನ್ನು ಸ್ವಾಗತಿಸಿದರು. ಒಟ್ಟಾರೆ, ಈ ಭಾಗದ ಗ್ರಾಮಸ್ಥರ ಸಂಭ್ರಮ ಮುಗಿಲುಮುಟ್ಟಿತ್ತು.
ತಮ್ಮ ಮನವಿಗೆ ಸ್ಪಂದಿಸಿದ ಸಚಿವರು ಮತ್ತು ಅಧಿಕಾರಿಗಳಿಗೆ ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಧನ್ಯವಾದ ಅರ್ಪಿಸಿದರು. ತಮ್ಮ ಬಹುದಿನದ ಕನಸು ನನಸಾದ ಬಗ್ಗೆ ಗ್ರಾಮಸ್ಥರು ಸಂತಸ ಹಂಚಿಕೊಂಡರು.