ಬೆಂಗಳೂರು: ಪ್ಯಾರಿಸ್ ಒಲಂಪಿಕ್ಸ್ ನಲ್ಲಿ 50 ಕೆ.ಜಿ. ವಿಭಾಗದ ಕುಸ್ತಿಯಲ್ಲಿ ಭಾರತಕ್ಕೆ ಒಂದು ಪದಕವನ್ನು ಖಚಿತಪಡಿಸಿರುವ ವಿನೇಶ್ ಪೋಗಟ್ ದಾಖಲೆ ಬರೆದಿದ್ದಾರೆ.
ಕ್ವಾರ್ಟರ್ ಫೈನಲ್ಸ್ ನಲ್ಲಿ ಜಪಾನ್ ನ ವಿಶ್ವದ ನಂಬರ್ ಒನ್ ಆಟಗಾರ್ತಿಯನ್ನು ಸೋಲಿಸಿ, ಸೆಮಿಫೈನಲ್ ತಲುಪಿದ್ದ ವಿನೇಶ್ ಪೋಗಟ್ ಸೆಮಿಫೈನಲ್ ನಲ್ಲಿ ಕ್ಯೂಬಾ ಆಟಗಾರ್ತಿ ವಿರುದ್ಧ ಭರ್ಜರಿ ಪ್ರದರ್ಶನ ತೋರುವ ಮೂಲಕ ಗೆಲುವು ಸಾಧಿಸಿದ್ದಾರೆ.
ಎದುರಾಳಿಗೆ ಒಂದು ಪಾಯಿಂಟ್ ಬಿಟ್ಟುಕೊಡದೆ, ಇಡೀ ಪಂದ್ಯವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿದ್ದ ಪೋಗಟ್, 5-0 ಅಂತರದಲ್ಲಿ ಗೆಲುವು ಸಾಧಿಸಿ ಫೈನಲ್ ಪ್ರವೇಶ ಮಾಡಿದ್ದಾರೆ. ಆ ಮೂಲಕ ಕುಸ್ತಿ ಪಂದ್ಯದಲ್ಲಿ ಫೈನಲ್ ಪ್ರವೇಶಿಸಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎಂಬ ದಾಖಲೆ ತಮ್ಮದಾಗಿಸಿಕೊಂಡಿದ್ದಾರೆ.
ಬಿಜೆಬಿ ಸಂಸದ ಬ್ರಿಜ್ ಭೂಷಣ್ ವಿರುದ್ಧದ ಪ್ರತಿಭಟನೆ ಮೂಲಕ ದೇಶದ ಗಮನಸೆಳೆದಿದ್ದ ಪೋಗಟ್, ಲೋಕಸಭೆ ಮುಂದೆ ಪ್ರತಿಭಟನೆ ಮಾಡಲು ಮುಂದಾಗಿ ಅವಮಾನಿತರಾಗಿದ್ದರು. ಪೊಲೀಸರು ಅಮಾನವೀಯ ರೀತಿಯಲ್ಲಿ ನಡೆದುಕೊಂಡು, ಈ ಪ್ರಕರಣ ಇಡೀ ದೇಶದ ಗಮನ ಸೆಳೆದಿತ್ತು.
ವಿನೇಶ್ ಪೋಗಟ್ ಇದೀಗ ಅವೆಲ್ಲವನ್ನೂ ಮರೆತು ಒಲಂಪಿಕ್ಸ್ ವೇದಿಕೆಯಲ್ಲಿ ಫೈನಲ್ ತಲುಪುವ ಮೂಲಕ ಪದಕ ಖಚಿತಪಡಿಸಿಕೊಂಡಿದ್ದಾರೆ. ಫೈನಲ್ ಪಂದ್ಯದಲ್ಲಿ ಅವರು ಗೆದ್ದು ಚಿನ್ನದ ಪದಕ ಗೆದ್ದರಂತೂ ಇಡೀ ಭಾರತವೇ ಸಂಭ್ರಮಿಸಲಿದೆ. ಜತೆಗೆ ಅವರು ಚಿನ್ನ ಗೆದ್ದ ಮೊದಲ ಕುಸ್ತಿಪಟು ಎನಿಸಿಕೊಳ್ಳಲಿದ್ದಾರೆ.