ಸುದ್ದಿ

ರೇಣುಕಾಸ್ವಾಮಿ ಕುಟುಂಬ ಭೇಟಿಯಾಗಿ ಹಣ ನೀಡಿದ ವಿನೋದ್ ರಾಜ್

Share It

ಚಿತ್ರದುರ್ಗ: ಕೆಲವು ದಿನಗಳ ಹಿಂದೆಯಷ್ಟೆ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ನಟ ದರ್ಶನ್ ತೂಗುದೀಪ ಅವರ ಭೇಟಿಯಾಗಿದ್ದ ನಟ ವಿನೋದ್ ರಾಜ್ ಇಂದು (ಜುಲೈ 26) ಚಿತ್ರದುರ್ಗಕ್ಕೆ ಹೋಗಿ ಸಂತ್ರಸ್ತ ರೇಣುಕಾಸ್ವಾಮಿ ಕುಟುಂಬವನ್ನು ಭೇಟಿ ಮಾಡಿ ಸಾಂತ್ವಾನ ಹೇಳುವ ಜೊತೆಗೆ 1 ಲಕ್ಷ ರೂಪಾಯಿ ಹಣ ಸಹಾಯವನ್ನು ಸಹ ಮಾಡಿದ್ದಾರೆ.

ಕಳೆದ ಜುಲೈ 23 ರಂದು ನಟ ವಿನೋದ್ ರಾಜ್, ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ಅಲ್ಲಿ ಬಂಧಿತ ದರ್ಶನ್ ಅವರನ್ನು ಮಾತನಾಡಿಸಿದ್ದರು.

ಇಂದು ಬೆಳಿಗ್ಗೆಯೇ ಚಿತ್ರದುರ್ಗಕ್ಕೆ ತೆರಳಿದ ನಟ ವಿನೋದ್ ರಾಜ್, ‘ಮನೆಗೆ ಆಧಾರಸ್ತಂಭವಾದ ಮಗನನ್ನು ಕಳೆದುಕೊಂಡಿದ್ದಾರೆ. ಕುಟುಂಬ ಪರಿತಪಿಸುತ್ತಿರುವ ಸ್ಥಿತಿ ಕಂಡು ಕರಳು ಕಿತ್ತು ಬರ್ತಿದೆ. ನಾವು ಮನುಷ್ಯರಾಗಿದ್ದೀವಾ? ಅಂತ ಮುಟ್ಟಿ ನೋಡಿಕೊಳ್ಳುವ ಕಾಲ. ಪ್ರತಿಯೊಂದು ಜೀವಿಗೂ ಜೀವವಿದೆ, ಮಕ್ಕಳು ಬಾಳಬೇಕು, ಬೆಳೆದು ಬೆಳಗಬೇಕು ಅಂತ ತಂದೆ ತಾಯಿ ಬೆಳೆಸುವರು, ಕೆಟ್ಟದ್ದು ಜಾಸ್ತಿಯಾದಾಗ ಇಂತಹ ಕೃತ್ಯ ನಡೆಯುವವು, ಇಂತಹ ಘಟನೆ ಹೆಚ್ಚಾಗದಂತೆ ಎಚ್ಚೆತ್ತುಕೊಬೇಕು’ ಎಂದಿದ್ದಾರೆ.

‘ಕಲಾವಿದರನ್ನು ನೋಡಿ ಜನ ಅನುಕರಣೆ ಮಾಡುತ್ತಾರೆ. ಹೀಗೆ ಆಗಿರುವುದು ಆಘಾತಕಾರಿ ವಿಷಯ. ಹೆಸರು, ಕೀರ್ತಿಯಲ್ಲಿರುವ ನಾವು ಎಚ್ಚರವಾಗಿರಬೇಕು, ನಮ್ಮ ಉನ್ನತವಾದ ಸ್ಥಾನ ಎತ್ತರದ ಮಟ್ಟದಲ್ಲಿರುವವರು ವಿವೇಕ ಮರೆಯಬಾರದು, ಅಚಾತುರ್ಯ‌ ನಡೆಯುತ್ತವೆ, ಮುಂದಿನ ತಲೆಮಾರುಗಳು ಹೀಗೆ ಆಗದಂತೆ ಎಚ್ಚರವಹಿಸಬೇಕು, ಮಾಧ್ಯಮ ತಿದ್ದಿ ಬುದ್ದಿ ಹೇಳಿದಂತೆ ಅನುಸರಿಸಿಕೊಂಡು ಸಾಗಬೇಕು’ ಎಂದು ವಿನೋದ್ ರಾಜ್​ಕುಮಾರ್ ಹೇಳಿದರು.

ದರ್ಶನ್ ಭೇಟಿ ವೇಳೆ ರೇಣುಕಸ್ವಾಮಿ ಕುಟುಂಬದ ಬಗ್ಗೆ ಮಾತನಾಡಿದರಾ? ಎಂಬ ಪ್ರಶ್ನೆಗೆ ಉತ್ತರಿಸಿದ ವಿನೋದ್ ರಾಜ್, ‘ದರ್ಶನ್ ಅವರನ್ನು ಜೈಲಿನಲ್ಲಿ ಭೇಟಿಯಾದಾಗ ಅವರು ರೇಣುಕಾ ಸ್ವಾಮಿ ಕುಟುಂಬದ ಬಗ್ಗೆ ಮಾತನಾಡಲಿಲ್ಲ, ಸಿಕ್ಕ ಸಮಯಾವಕಾಶದಲ್ಲಿ ಹೆಚ್ಚು ಮಾತನಾಡಲು ಆಗಲಿಲ್ಲ, ನನ್ನನ್ನು ನೋಡಿದಾಕ್ಷಣ‌ ದರ್ಶನ್ ಭಾವುಕರಾದರು, ದರ್ಶನ್ ನನ್ನನ್ನು ತಬ್ಬಿಕೊಂಡರು ಅಷ್ಟೆ, ಇಂತಹ ಘಟನೆ ನಡೆಯಬಾರದಿತ್ತು, ಮನುಷ್ಯ, ಕ್ರೋಧ, ದ್ವೇಷ, ಅಸೂಯೆ ಎಲ್ಲ ಬಿಡಬೇಕು, ಎಲ್ಲದಕ್ಕೂ ಕಡಿವಾಣ ಹಾಕಬೇಕು’ ಎಂದರು.

‘ನಮ್ಮ ತಾಯಿ ಲೀಲಾವತಿಯವರ ಸಿನೆಮಾ ನೋಡಿದ್ದೇವೆ ಎಂದು ರೇಣುಕಾಸ್ವಾಮಿ ತಂದೆ ಹೇಳಿದರು. ಅದನ್ನು ಕೇಳಿ ಇನ್ನಷ್ಟು ಬೇಸರವಾಯ್ತು’ ಎಂದು ವಿನೋದ್ ರಾಜ್ ಭಾವುಕರಾದರು. ಈ ಸಂದರ್ಭದಲ್ಲಿ ರೇಣುಕಾಸ್ವಾಮಿ ಕುಟುಂಬದವರನ್ನು ಸಂತೈಸಿದ ವಿನೋದ್ ರಾಜ್ ಕುಟುಂಬಕ್ಕೆ 1 ಲಕ್ಷ ರೂಪಾಯಿ ಚೆಕ್ ವಿತರಣೆ ಮಾಡಿದರು.


Share It

You cannot copy content of this page