ಕ್ರೀಡೆ ಸುದ್ದಿ

ಟಿ-20 ಕ್ರಿಕೆಟ್ ಗೆ ವಿದಾಯ ಘೋಷಿಸಿದ ರೋಹಿತ್ ಶರ್ಮಾ-ಕೊಹ್ಲಿ!

Share It

ಬಾರ್ಬಡೋಸ್: ಅಸಂಖ್ಯಾತ ಭಾರತೀಯ ಅಭಿಮಾನಿಗಳಿಗೆ ಟಿ20 ವಿಶ್ವಕಪ್ ಗೆಲುವಿನ ಔತಣ ಉಣಬಡಿಸಿದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಮಾಜಿ ನಾಯಕ ವಿರಾಟ್ ಕೊಹ್ಲಿ ಕೊನೆಗೊಂದು ಬೇಸರ ಮೂಡಿಸಿದ್ದಾರೆ.
ಟಿ-20 ವಿಶ್ವಕಪ್ ಗೆಲುವಿನ ಬೆನ್ನಲ್ಲೇ ಈ ಇಬ್ಬರು ದಿಗ್ಗಜರು ಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ.

ಪಂದ್ಯ ಮುಗಿದ ಬಳಿಕ ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸುವ ವೇಳೆ ವಿರಾಟ್ ಕೊಹ್ಲಿ ತಮ್ಮ ನಿವೃತ್ತಿಯ ಬಗ್ಗೆ ಖಚಿತಪಡಿಸಿದರು. ನಾಯಕ ರೋಹಿತ್ ಶರ್ಮಾ ಅವರೂ ಬಳಿಕ ತನ್ನ ಟಿ-20 ನಿವೃತ್ತಿಯನ್ನು ಘೋಷಿಸಿದರು.

ಇದು ನನ್ನ ಕೊನೆಯ ಟಿ20 ವಿಶ್ವಕಪ್. ಇದು ಭಾರತದ ಪರ ನನ್ನ ,ಕೊನೆಯ ಟಿ20 ಪಂದ್ಯ. ಮುಂದಿನ ತಲೆಮಾರು ಜವಾಬ್ದಾರಿ ಹೊತ್ತು ಕೊಳ್ಳಲು ಇದು ಸಕಾಲ ಎಂದು ಕೊಹ್ಲಿ ಪಂದ್ಯದ ಬಳಿಕ ಹೇಳಿದ್ದಾರೆ.

ಫೈನಲ್ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, “ಇದು ನನ್ನ ಕೊನೆಯ ಅಂತಾರಾಷ್ಟ್ರೀಯ ಟಿ-20 ಪಂದ್ಯವೂ ಹೌದು. ಈ ಫಾರ್ಮಾಟ್ ಗೆ ವಿದಾಯ ಹೇಳಲು ಇದಕ್ಕಿಂತ ಸಕಾಲ ಇನ್ನೊಂದಿಲ್ಲ. ನಾನು ಈ ಫಾರ್ಮಾಟ್ ನೊಂದಿಗೆ ನನ್ನ ವೃತ್ತಿ ಜೀವನ ಆರಂಭಿಸಿದ್ದೆ. ಕೊನೆಯಲ್ಲಿ ನಾನು ಟಿ-20 ವಿಶ್ವಕಪ್ ಗೆಲ್ಲಬೇಕೆಂದು ಬಯಸಿದ್ದೆ” ಎಂದು ಹೇಳಿದರು.

ಶನಿವಾರದ ಪಂದ್ಯದಲ್ಲಿ 59 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್‌ ಸಹಿತ 76 ರನ್‌ ಸಿಡಿಸಿದ ಕೊಹ್ಲಿ, ತಂಡದ ಮೊತ್ತ ಹೆಚ್ಚಿಸುವಲ್ಲಿ ಗಣನೀಯ ಕೊಡುಗೆ ನೀಡಿದ್ದರು. 35 ವರ್ಷದ ಕೊಹ್ಲಿ 125 ಅಂತಾರಾಷ್ಟ್ರೀಯ ಟಿ-20 ಪಂದ್ಯಗಳಲ್ಲಿ 4188 ರನ್‌ ಬಾರಿಸಿದ್ದಾರೆ.

ಇದರಲ್ಲಿ 1 ಶತಕ, 38 ಅರ್ಧ ಶತಕಗಳು ಸೇರಿವೆ.
ಟಿ-20ಯಲ್ಲಿ 159 ಪಂದ್ಯಗಳನ್ನು ಆಡಿರುವ ರೋಹಿತ್‌, 4231 ರನ್‌ ಗಳಿಸಿದ್ದು, ಇದರಲ್ಲಿ 5 ಶತಕ ಹಾಗೂ 37 ಅರ್ಧಶತಕಗಳು ಸೇರಿವೆ.


Share It

You cannot copy content of this page