ಬೆಂಗಳೂರು: ಮೂಡಾ ಹಗರಣದ ನೆಪದಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಕಳೆದೊಂದು ವಾರದಿಂದ ನಡೆಸುತ್ತಿರುವ ಹೈಡ್ರಾಮಕ್ಕೆ ಜನಾಕ್ರೋಶ ವ್ಯಕ್ತವಾಗಿದೆ.
ಮೂಡಾ ಹಗರಣವನ್ನು ನೆಪವಾಗಿಟ್ಟುಕೊಂಡು, ವಿಧಾನ ಮಂಡಲ ಅಧಿವೇಶನದಲ್ಲಿ ಗದ್ದಲ ಸೃಷ್ಟಿಸಿದ, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ವಿಪಕ್ಷಗಳಾಗಿ ತಮ್ಮ ಕಾರ್ಯವೇನು ಎಂಬುದನ್ನು ಸಂಪೂರ್ಣ ಮರೆತಂದಿದೆ ಎಂದು ರೈತ ಸಂಘಟನೆಗಳು ಕಿಡಿಕಾರಿವೆ. ವಿಧಾನಸಭೆಯಲ್ಲಿ ಚರ್ಚೆ ನಡೆಸಲು ರೈತರ ನೂರಾರು ಸಮಸ್ಯೆಗಳಿದ್ದವು. ನೀರಾವರಿ, ರಸಗೊಬ್ಬರದ ಕೊರತೆಯಂತಹ ಸಮಸ್ಯೆಗಳನ್ನು ಬಿಟ್ಟು ಮೂಡ ನೆಪದಲ್ಲಿ ಇಡೀ ಸದನವನ್ನು ಹಳ್ಳ ಹಿಡಿಸಿದ್ದು ಎಷ್ಟು ಸರಿ ಎಂದು ರೈತ ಮುಖಂಡ ಬಡಗಲಪುರ ನಾಗೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೂಡಾ ಹಗರಣ ವಿರೋಧಿ ಮೈಸೂರಿಗೆ ಪಾದಯಾತ್ರೆ ಹೊರಟ ಮೈತ್ರಿ ಪಕ್ಷಗಳನ್ನು ವಿರೋಧಿಸುವ ಸಲುವಾಗಿ, ಕಾಂಗ್ರೆಸ್ ತಾನು ಆಡಳಿತ ಪಕ್ಷ ಎಂಬುದನ್ನೇ ಮರೆಯಿತು. ತಾನು ವಿಪಕ್ಷಗಳಿಗಿಂತ ಮೊದಲೇ ಜನಾಂದೋಲನ ಸಭೆ ನಡೆಸಿ, ರಾಜಕೀಯ ಮಾಡಿತೋ ಹೊರತು, ರಾಜ್ಯದ ಬಗ್ಗೆ ಚಿಂತನೆ ನಡೆಸಲಿಲ್ಲ. ಒಟ್ಟಾರೆ, ಎಲ್ಲ ರಾಜಕೀಯ ಪಕ್ಷಗಳಿಗೆ ತಮ್ಮ ಅಸ್ತಿತ್ವ ಮುಖ್ಯವಾಗಿದೆಯೇ ಹೊರತು ನಾಡಿನ ರೈತರ ಬಗ್ಗೆ ಕಾಳಜಿಯಿಲ್ಲ ಎಂದು ಕಿಡಿಕಾರಿದ್ದಾರೆ.
ಈ ನಡುವೆ ರಾಜ್ಯದ ಶಿರೂರಿನಲ್ಲಿ ಗುಡ್ಡ ಕುಸಿತ ಸಂಭವಿಸಿದೆ. ಅದೇ ಮಾದರಿಯಲ್ಲಿ ಕೇರಳದ ವೈನಾಡಿನಲ್ಲಿ ನಡೆದ ಗುಡ್ಡ ಕುಸಿತದ ದುರಂತ ರಾಷ್ಟ್ರೀಯ ವಿಪತ್ತು ಎನಿಸಿಕೊಂಡಿದೆ. 450 ಕ್ಕೂ ಅಧಿಕ ಜನರು ಸಾನ್ನಪ್ಪಿದ್ದಾರೆ. ರಾಜ್ಯದಲ್ಲಿ ಸಕಲೇಶಪುರ, ಚಿಕ್ಕಮಗಳೂರು ಭಾಗದಲ್ಲಿ ಅಲ್ಲಲ್ಲಿ ಗುಡ್ಡ ಕುಸಿತ ಸಂಭವಿಸುತ್ತಲೇ ಇದೆ. ಮುಂದೆ ಇದೊಂದು ರಾಷ್ಟ್ರೀಯ ವಿಪತ್ತಿನಂತಹ ಘಟನೆಯ ಮುನ್ಸೂಚನೆ ಎಂಬುದನ್ನು ಗಮನಿಸದೆ, ರಾಜಕೀಯ ಪಕ್ಷಗಳ ಕಚ್ಚಾಟದಲ್ಲಿ ತೊಡಗಿವೆ ಎಂಬುದು ಪ್ರಗತಿಪರ ಚಿಂತಕರ ಅಭಿಪ್ರಾಯವಾಗಿದೆ.
ಕೇಂದ್ರ ಸರಕಾರ ರಾಜ್ಯವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದು, ಜಿಎಸ್‌ಟಿ ಅನುದಾನ, ಬರ ಪರಿಹಾರ ನೀಡುತ್ತಿಲ್ಲ. ಎನ್‌ಡಿಎ ಮೈತ್ರಿ ಪಕ್ಷ ಕೇಂದ್ರದ ಮನವೊಲಿಸುವ ಕಡೆಗೆ ಗಮನ ನೀಡುವುದಿಲ್ಲ. ಇನ್ನು ಆಡಳಿತ ಪಕ್ಷ ಕೇಂದ್ರದ ವಿರುದ್ಧ ಸೆಟೆದು ನಿಂತು ರಾಜ್ಯಕ್ಕೆ ಆಗಿರುವ ಅನ್ಯಾಯ ಪ್ರಶ್ನೆ ಮಾಡುವುದಿಲ್ಲ. ಹೀಗಾಗಿ, ಯಾವಾಗಲೂ ಕರ್ನಾಟಕ ಮಲತಾಯಿ ಧೋರಣೆ ಅನುಭವಿಸುತ್ತಿದೆ ಎಂದು ಕನ್ನಡ ಹೋರಾಟಗಾರರು ಅಭಿಪ್ರಾಯಪಟ್ಟಿದ್ದಾರೆ.
ಒಂದು ಪಕ್ಷ ದಲಿತರ ಹಕ್ಕುಗಳನ್ನೇ ವಿರೋಧಿಸುತ್ತದೆ. ಮತ್ತೊಂದು ಪಕ್ಷ ನಾವು ದಲಿತರ ಪರ ಎಂದು ದಲಿತರ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ದುರ್ಬಳಕೆ ಮಾಡಿಕೊಂಡಿದೆ. ಒಟ್ಟಾರೆ, ಯಾವ ರಾಜಕೀಯ ಪಕ್ಷಗಳು ದಲಿತರ, ಹಿಂದುಳಿದವರ ಪರವಾಗಿಲ್ಲ ಎಂಬುದನ್ನು ಆಗಾಗ ಸಾಭಿತು ಮಾಡುತ್ತಲೇ ಬರುತ್ತಿವೆ ಎಂದು ದಲಿತ ಸಂಘಟನೆಯ ಮುಖಂಡರೊಬ್ಬರು ಕಿಡಿಕಾರಿದ್ದಾರೆ.
ಒಟ್ಟಾರೆ, ಮೂಡಾ ಹಗರಣ, ವಾಲ್ಮೀಕಿ ನಿಗಮದ ಹಗರಣದ ನೆಪದಲ್ಲಿ ವಿಧಾನಮಂಡಲ ಮತ್ತು ಅನಂತರ ವಿಪಕ್ಷಗಳು ಮತ್ತು ಆಡಳಿತ ಪಕ್ಷ ನಡೆದುಕೊಂಡ ರೀತಿ ರಾಜ್ಯದ ಜನತೆಯನ್ನು ಕೆರಳಿಸಿದೆ. ಕರಾವಳಿ, ಮಲೆನಾಡು ಮತ್ತು ಉತ್ತರ ಕರ್ನಾಟಕದ ಜಿಲ್ಲೆಗಳು ಮಳೆಯಿಂದ ಪ್ರವಾಹಕ್ಕೆ ತುತ್ತಾಗಿದ್ದರೆ, ರಾಜ್ಯದ ಕೆಲವು ಭಾಗಗಳಲ್ಲಿ ಬರಗಾಲ ತಾಂಡವವಾಡುತ್ತಿದೆ.
ಇದೆಲ್ಲದರ ಬಗ್ಗೆ ಚಿಂತನೆ ನಡೆಸಿ, ಸೂಕ್ತ ಯೋಜನೆ ರೂಪಿಸಬೇಕಾದ ಜನಪ್ರತಿನಿಧಿಗಳು ತಮ್ಮ ಸ್ವಾರ್ಥ ಸಾಧನೆಗಾಗಿ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
